ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರ ಪೈಕಿ ನಾಲ್ವರ ಸಾವು; ಇನ್ನೊಬ್ಬರದು ಐಸಿಯುನಲ್ಲಿ ಜೀವನ್ಮರಣ ಹೋರಾಟ..

Suicide
ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು.
Published on

ಕೋಲಾರ: ಒಂದೇ ಕುಟುಂಬದ ಐವರು ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದು, ಆ ಪೈಕಿ ಇಂದು ನಾಲ್ವರು ಸಾವಿಗೀಡಾಗಿದ್ದಾರೆ. ಕೋಲಾರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ಇಂಥದ್ದೊಂದು ಆತ್ಮಹತ್ಯೆ ಯತ್ನ ನಿನ್ನೆ ಸಂಜೆ ಸುಮಾರಿಗೆ ನಡೆದಿತ್ತು.

ಮುನಿಯಪ್ಪ (70), ಅವರ ಪತ್ನಿ ನಾರಾಯಣಮ್ಮ (45), ಬಾಬು (45), ಪುಷ್ಪ (35) ಹಾಗೂ ಗಂಗೋತ್ರಿ (18) ಆತ್ಮಹತ್ಯೆಗೆ ಯತ್ನಿಸಿದ್ದ ಕುಟುಂಬ ಸದಸ್ಯರು. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ನಿನ್ನೆ ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆರ್​.ಎಲ್​. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ಪುಷ್ಪ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಉಳಿದ ನಾಲ್ವರು ಚಿಕಿತ್ಸೆ ಫಲಿಸದೆ ಇಂದು ಸಾವಿಗೀಡಾಗಿದ್ದಾರೆ. ಮಗು ಅಪಹರಣ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ವಿಚಾರಣೆಗೆ ಹೆದರಿ ಇವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಖಚಿತ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net