

ನವದೆಹಲಿ: ಬರೋಬ್ಬರಿ ಏಳು ವರ್ಷಗಳ ನಂತರ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳು ನೇಣುಗಂಬಕ್ಕೆ ಏರುತ್ತಿದ್ದಾರೆ. ದೆಹಲಿ ಪಟಿಯಾಲಾ ಕೋರ್ಟ್ ಜಾರಿ ಮಾಡಿದ ಡೆತ್ ವಾರಂಟ್ ಅನ್ವಯ ಮಾ.20ರಂದು ಮುಂಜಾನೆ 5.30ಕ್ಕೆ ಮುಕೇಶ್ ಸಿಂಗ್ (32), ವಿನಯ್ ಶರ್ಮಾ (26), ಪವನ್ ಗುಪ್ತಾ (25) ಹಾಗೂ ಅಕ್ಷಯ್ ಕುಮಾರ್ ಸಿಂಗ್ (31)ರನ್ನು ನೇಣಿಗೇರಿಸಲು ತಿಹಾರ್ ಜೈಲ್ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದೆ.
ಮಾ.20ರ ಮರಣದಂಡನೆ ತಪ್ಪಿಸಿಕೊಳ್ಳಲು ಅಪರಾಧಿಗಳು ಪ್ರಯತ್ನ ಮಾಡಿದ್ದರು. ತಮ್ಮನ್ನು ನೇಣಿಗೇರಿಸಬಾರದು. ಗಲ್ಲುಶಿಕ್ಷೆಗೆ ತಡೆ ನೀಡಬೇಕು. ನಮಗಿನ್ನೂ ಕಾನೂನು ಪ್ರಕ್ರಿಯೆಗಳನ್ನು ನಡೆಸುವುದು ಬಾಕಿ ಇದೆ ಎಂದು ದೆಹಲಿ ಪಟಿಯಾಲಾ ಹೌಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ದೆಹಲಿ ಕೋರ್ಟ್ ಅರ್ಜಿಗಳನ್ನು ವಜಾ ಮಾಡಿದೆ. ಹಾಗೇ ಅಪರಾಧಿಗಳಲ್ಲೋರ್ವನಾದ ಪವನ್ ಗುಪ್ತಾ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯೂ ತಿರಸ್ಕೃತಗೊಂಡಿದೆ.
ನಾಳೆ ಮುಂಜಾನೆ 5.30ಕ್ಕೆ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಬೇಕು ಎಂದು ದೆಹಲಿ ಪಟಿಯಾಲಾ ಕೋರ್ಟ್ ಆದೇಶ ನೀಡಿದೆ.
ಅಪರಾಧಿಗಳಿಗೆ ಇನ್ಯಾವುದೇ ಕಾನೂನು ಪ್ರಕ್ರಿಯೆಗಳು ಬಾಕಿ ಇಲ್ಲ. ಪವನ್ ಮತ್ತು ಅಕ್ಷಯ್ ಸಲ್ಲಿಸಿದ್ದ ಎರಡನೇ ಕ್ಷಮಾದಾನ ಅರ್ಜಿಯನ್ನೂ ರಾಷ್ಟ್ರಪತಿ ತಿರಸ್ಕಾರ ಮಾಡಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹಮದ್ ಇಂದು ಪಟಿಯಾಲಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇಂದು ದೆಹಲಿ ಪಟಿಯಾಲಾ ಹೌಸ್ ಕೋರ್ಟ್ನ ಆವರಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆಯಿತು. ಡಿವೋರ್ಸ್ಗೆ ಮನವಿ ಸಲ್ಲಿಸಿರುವ ಅಪರಾಧಿ ಅಕ್ಷಯ್ ಕುಮಾರ್ ಪತ್ನಿ ನ್ಯಾಯಾಲಯದ ಅಂತಿಮ ತೀರ್ಪನ್ನು ಕೇಳುತ್ತಿದ್ದಂತೆ ಮೂರ್ಛೆ ಹೋದರು.
2012ರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಅದರಲ್ಲಿ ರಾಮ ಸಿಂಗ್ ಎಂಬಾತ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಬಾಲಾಪರಾಧಿಯನ್ನು 2015ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗುಳಿದ ನಾಲ್ವರು ನಾಳೆ ಮುಂಜಾನೆ ನೇಣಿಗೇರಲಿದ್ದಾರೆ.(ಏಜೆನ್ಸೀಸ್)