ಕನ್ನಡದ ಅಭಿವೃದ್ಧಿಗೆ ಪ್ರಾಧಿಕಾರದ ನಾಲ್ಕು ಹೊಸ ಯೋಜನೆ: ಕ.ಅ.ಪ್ರಾ. ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ

ವಿಜಯವಾಣಿ (28)
Published on

ಬೆಂಗಳೂರು: ಕನ್ನಡ ಭಾಷಾ ಬೆಳವಣಿಗೆಗೆ 4 ಕಾರ್ಯಕ್ರಮಗಳನ್ನು ಹೊಸ ಸ್ವರೂಪದಲ್ಲಿ ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಆಡಳಿತದಲ್ಲಿ ಕನ್ನಡ ಅನುಷ್ಠಾನ, ಕನ್ನಡ ಭಾಷೆಯ ಅಭಿವೃದ್ಧಿ, ಶಿಕ್ಷಣದಲ್ಲಿ ಕನ್ನಡ, ಭಾಷೆ ಬೆಳವಣಿಗೆಗೆ ಇರುವ ಸಮಸ್ಯೆ ಹಾಗೂ ಅವುಗಳನ್ನು ನಿವಾರಿಸಲು ತಮ್ಮ ಮುಂದಿರುವ ಸವಾಲು ಹಾಗೂ ಕನ್ನಡದ ಕಾರ್ಯ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು.

ಸ್ಥಳನಾಮ ಉಳಿಸಲು ಆದ್ಯತೆ

ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಸ್ಥಳನಾಮಗಳಿವೆ. ಆಯಾ ಊರಿನ ಇತಿಹಾಸ, ಹಿನ್ನೆಲೆ ಆಧರಿಸಿ ಬಳಕೆಯಲ್ಲಿರುವ ಈ ಪದಗಳನ್ನು ಉಳಿಸಿಕೊಳ್ಳಬೇಕಿದೆ. ಇವನ್ನು ಕ್ರಮೇಣ ನಿಘಂಟಿಗೆ ಸೇರಿಸಿದಲ್ಲಿ ಕನ್ನಡದ ಪದಕೋಶ ಇನ್ನಷ್ಟು ಬಲಗೊಳ್ಳುತ್ತದೆ. ಜತೆಗೆ ಭಾಷೆ-ಸಂಸ್ಕೃತಿ-ಚರಿತ್ರೆಯ ಸ್ವರೂಪವನ್ನು ಜನರಿಗೆ ತಿಳಿಸಿದಂತಾಗುತ್ತದೆ. ಇದಕ್ಕಾಗಿ ಆಯಾ ಭಾಗದ ಶಾಲೆಗಳ ಎನ್​ಎಸ್​ಎಸ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಹಳ್ಳಿಗಳಲ್ಲಿರುವ ಅಂಗಡಿಗಳ ನಾಮಫಲಕಗಳಲ್ಲಿ ಸ್ಥಳನಾಮವನ್ನು ಬರೆಯಿಸುವ ಕೆಲಸಕ್ಕೆ ನವೆಂಬರ್ ತಿಂಗಳಿನಲ್ಲೇ ಚಾಲನೆ ನೀಡಲಾಗುತ್ತದೆ ಎಂದರು.

ಸಮನ್ವಯ ಸಂಸ್ಕೃತಿಗಾಗಿ ಕೃತಿ ಪ್ರಕಟ

ಕರುನಾಡು ಸೌಹಾರ್ದ ಸಂಸ್ಕೃತಿಗೆ ಹೆಸರಾಗಿದ್ದು, ‘ಸರ್ವ ಜನಾಂಗದ ಶಾಂತಿಯ ತೋಟ’ ಶೀರ್ಷಿಕೆಯಡಿ ‘ಕರ್ನಾಟಕದ ಸೌಹಾರ್ದ ಸಂಸ್ಕೃತಿ’ ಕುರಿತು ಕಡಿಮೆ ಬೆಲೆಯ 100 ಪುಸ್ತಕಗಳನ್ನು ಪ್ರಕಟಿಸುವ ಯೋಜನೆಗೆ ಚಾಲನೆ ದೊರೆತಿದೆ. ಇವನ್ನು ಶಾಲಾ ಮಕ್ಕಳಿಗೆ ಹಂಚುವ ಮೂಲಕ ನಮ್ಮ ಸಂಸ್ಕೃತಿ, ಆಚಾರ-ವಿಚಾರ ತಿಳಿಸುವ ಪ್ರಯತ್ನ ನಡೆಸಲಾಗುವುದು. ಈಗಾಗಲೇ 12 ಪುಸ್ತಕಗಳು ಮುದ್ರಣಗೊಂಡಿದ್ದು, 25 ಪುಸ್ತಕಗಳು ಸಂಗ್ರಹಗೊಂಡಲ್ಲಿ ಈ ವರ್ಷಾಂತ್ಯಕ್ಕೆ ಮೊದಲ ಹಂತದ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕ್ಷೇತ್ರ ಪುನರ್ವಿಂಗಡಣೆಯಿಂದ ಹಿನ್ನಡೆ

ಪ್ರಸ್ತುತ ಕರ್ನಾಟಕದ ಜನಸಂಖ್ಯೆ 7 ಕೋಟಿ ಇದ್ದು, ಕನ್ನಡ ಮಾತನಾಡುವವರ ಸಂಖ್ಯೆ 4 ಕೋಟಿಯಷ್ಟಿದೆ. ಉಳಿದವರು ಅನ್ಯಭಾಷಿಕರು. ಕನ್ನಡ ಭಾಷೆ ವೇಗದಲ್ಲಿ ಬೆಳವಣಿಗೆ ಆಗುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಹಿಂದಿ ಭಾಷೆ ಶೇ.66, ಬೆಂಗಾಲಿ ಶೇ.17, ತಮಿಳು ಮತ್ತು ತೆಲುಗು ಶೇ.16 ಬೆಳವಣಿಗೆ ಹೊಂದುತ್ತಿವೆ. ಆದರೆ, ಕನ್ನಡದ್ದು ಶೇ.3.7 ಇದೆ. ಇದರ ಜತೆಗೆ ಮುಂದಿನ ವರ್ಷ ಜನಸಂಖ್ಯೆ ಆಧರಿಸಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಆದಲ್ಲಿ ಉತ್ತರಪ್ರದೇಶ, ಬಿಹಾರ ರಾಜ್ಯಗಳಲ್ಲಿ ಹೆಚ್ಚಿನ ಕ್ಷೇತ್ರಗಳು ರಚನೆಯಾಗುತ್ತವೆ. ಆದರೆ, ದಕ್ಷಿಣ ಭಾರತಕ್ಕೆ ಕಡಿಮೆ ಕ್ಷೇತ್ರಗಳು ಸಿಗುವ ಸಾಧ್ಯತೆ ಇದೆ. ಇದರಿಂದ ಹಿಂದಿ ಭಾಷೆ ಮೇಲುಗೈ ಪಡೆದು ಇತರ ಭಾಷೆಗಳ ಬೆಳವಣಿಗೆಗೆ ಅಡ್ಡಿಯಾಗಬಹುದೆಂಬ ಭೀತಿ ಇದೆ. ಹಾಗಾಗಿ ಕನ್ನಡ ಹಾಗೂ ಇತರ ಭಾಷೆಗಳಿಗೂ ಹಿಂದಿಯಷ್ಟೇ ಪ್ರಾಧಾನ್ಯ ಹೊಂದಲು ಕೇಂದ್ರ ಸರ್ಕಾರವೇ ಪೂರಕ ವಾತಾವರಣ ನಿರ್ವಿುಸಬೇಕಿದೆ ಎಂದು ಪ್ರೊ. ಬಿಳಿಮಲೆ ಸಲಹೆ ನೀಡಿದರು.

ಶಾಸ್ತ್ರೀಯ ಕೇಂದ್ರಕ್ಕೆ ಸ್ಥಳ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಮನ್ನಣೆ ದೊರೆತು ಒಂದೂವರೆ ದಶಕ ಕಳೆದಿದ್ದರೂ, ಪೂರ್ಣ ಪ್ರಮಾಣದಲ್ಲಿ ಭಾಷಾ ಅಧ್ಯಯನದ ಕೆಲಸ ಆಗುತ್ತಿಲ್ಲ. ರಾಜ್ಯ ಸರ್ಕಾರವೇ ಆ ಹೊಣೆಯನ್ನು ಹೊರುವ ಬಗ್ಗೆಯೂ ಸಲಹೆ ಕೇಳಿಬಂದಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಪ್ರಾಕೃತ, ಪಾಲಿ, ಮರಾಠಿ, ಬಂಗಾಳಿ ಮತ್ತು ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನ ನೀಡಿದೆ. ಇದಕ್ಕಾಗಿ ಮೈಸೂರಿನಲ್ಲಿರುವ ಹಾಲಿ ಕೇಂದ್ರವನ್ನೇ ಭಾರತೀಯ ಭಾಷಾ ವಿಶ್ವವಿದ್ಯಾಲಯ ಆಗಿ ಪರಿವರ್ತಿಸುವ ಚಿಂತನೆ ನಡೆದಿದೆ. ಈ ಐದು ಭಾಷೆಗಳ ಜತೆಗೆ ಈಗಾಗಲೇ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ತಮಿಳು, ಕನ್ನಡ ಸೇರಿ ಒಟ್ಟು 10 ಭಾಷೆಗಳನ್ನು ಒಂದೇ ಸೂರಿನಡಿ ತಂದು ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ರಾಜ್ಯ ಸರ್ಕಾರ ಆಡಳಿತ ಭಾಷೆಯಾಗಿ ಕನ್ನಡಕ್ಕೆ ಬೇಕಾದ ಪೂರಕ ವಾತಾವರಣ ರೂಪಿಸುವ ಕೆಲಸವನ್ನು ಆಯಾ ಕಾಲಘಟ್ಟದಲ್ಲಿ ಮಾಡಿದೆ. ಇದರಿಂದಾಗಿ ವಿಧಾನಸೌಧದಲ್ಲಿ ಕನ್ನಡ ಶೇ.90-95 ಅನುಷ್ಠಾನವಾಗಿದೆ. ಹೃದಯದ ಭಾಷೆಯಾದಲ್ಲಿ ಕನ್ನಡ ಇನ್ನಷ್ಟು ಬೆಳವಣಿಗೆ ಹೊಂದಬೇಕು. ಆದರೂ, ಪ್ರಾಥಮಿಕ ಶಿಕ್ಷಣವನ್ನು ಈಗಲೇ ಬಲಗೊಳಿಸದಿದ್ದಲ್ಲಿ ಮುಂದಿನ 100 ವರ್ಷದಲ್ಲಿ ಕನ್ನಡವು ಮೌಖಿಕ ಭಾಷೆಯಾಗುವ ಅಪಾಯವಿದೆ. | ಪ್ರೊ. ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಕನ್ನಡ ಕಸ್ತೂರಿ

ಡಿಜಿಟಲ್ ಮಾಧ್ಯಮದಲ್ಲಿ ಕನ್ನಡವನ್ನು ಜಗಜ್ಜಾಹೀರಾಗಿಸಬೇಕು. ಇದಕ್ಕಾಗಿ ಹೊಸ ತಂತ್ರಾಂಶ ‘ಕನ್ನಡ ಕಸ್ತೂರಿ’ ಅಭಿವೃದ್ಧಿಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಪ್ರಾಯೋಗಿಕವಾಗಿ ಶೇ. 80 ಕೆಲಸ ಆಗಿದ್ದು, ಮುಂಬರುವ ಜನವರಿ ವೇಳೆಗೆ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಸರ್ಕಾರದ ಎಲ್ಲ ಇಲಾಖೆಗಳು, ಅರೆ ಸರ್ಕಾರಿ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲೂ ಕನ್ನಡ ಫಾಂಟ್ ಹಾಗೂ ಇತರ ತಾಂತ್ರಿಕ ಅಂಶಗಳು ಏಕರೂಪತೆ ಪಡೆಯಲಿವೆ ಎಂದು ಬಿಳಿಮಲೆ ತಿಳಿಸಿದರು.

ಬಿಕ್ಕಟ್ಟು ಎದುರಿಸಲು ಯುವಜನತೆ ಸಿದ್ಧರಾಗಲಿ

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿನ ಮೂಲಕ ಯಾರ ಮೇಲೂ ‘ಕನ್ನಡ’ವನ್ನು ಬಲವಂತವಾಗಿ ಹೇರದೆ ನಮ್ಮ ನೆಲದ ಭಾಷೆಯ ಬಗೆಗೆ ಅಭಿಮಾನ ಮೂಡಿಸುವುದು ಯುಕ್ತ. ಈ ವಿಚಾರದಲ್ಲಿ ಭಾಷೆ ಉಳಿವಿಗಾಗಿ 21ನೇ ಶತಮಾನದಲ್ಲಿನ ಬಿಕ್ಕಟ್ಟುಗಳನ್ನು ಎದುರಿಸಲು ಕನ್ನಡದ ಯುವಜನತೆ ಹಿಂದಿಗಿಂತ ಈಗ ಹೆಚ್ಚು ಸಿದ್ಧರಾಗಬೇಕಿದೆ ಎಂದರು. ಕನ್ನಡ ಉಳಿಸಬೇಕೆಂದು ಕೂಗುವ ನಾವು ಹೊರಗಿನಿಂದ ಬರುವ ಅನ್ಯಭಾಷಿಕರೊಂದಿಗೆ ಅವರ ಭಾಷೆಯಲ್ಲಿಯೇ ಮಾತುಕತೆ ನಡೆಸುತ್ತೇವೆ. ಹಾಗಾದರೆ ಕನ್ನಡ ಉಳಿಸುವುದು ಹೇಗೆ? ಪರ ಭಾಷಿಕರಿಗೆ ಕನ್ನಡ ಕಲಿಯುವ ವಾತಾವರಣ ಸೃಷ್ಟಿಸಬೇಕಲ್ಲವೆ? ಈ ನಿಟ್ಟಿನಲ್ಲಿ ಪ್ರಾಧಿಕಾರದಿಂದ ಸುಲಭವಾಗಿ ಕನ್ನಡ ಕಲಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಆಸಕ್ತರಿರುವ ಜಾಗಕ್ಕೆ ತೆರಳಿ ತರಗತಿ ನಡೆಸಲಾಗುತ್ತಿದೆ. ಸದ್ಯ ರಾಜಧಾನಿಯ 26 ಕೇಂದ್ರಗಳಲ್ಲಿ 1,200ಕ್ಕೂ ಹೆಚ್ಚು ಅನ್ಯಭಾಷಿಕರು ಕನ್ನಡ ಕಲಿಯುತ್ತಿದ್ದಾರೆ. ಇವರಿಗೆ ಕನ್ನಡ ಕಲಿಸುವವರಿಗೆ 3 ತಿಂಗಳ ಮಟ್ಟಿಗೆ ಮಾಸಿಕ ತಲಾ 10 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಇನ್ನಷ್ಟು ವಿಸõತ ರೂಪದಲ್ಲಿ ಅನುಷ್ಠಾನಕ್ಕೆ ತರುವ ಯತ್ನ ನಡೆದಿದೆ ಎಂದು ಪ್ರೊ. ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.

ಸಣ್ಣ ಭಾಷೆಗಳ ಉಳಿವಿಗೆ ನೀತಿ

ರಾಜ್ಯದಲ್ಲಿ 230 ಉಪ ಭಾಷೆಗಳಿವೆ. ಇವುಗಳಲ್ಲಿ ಬೆರಳೆಣಿಕೆಯಷ್ಟು ಬಿಟ್ಟು ಉಳಿದವು ನಶಿಸಿಹೋಗುವ ಹಾದಿಯಲ್ಲಿವೆ. ಕರಾವಳಿ ಭಾಗದಲ್ಲಿ ಕೊರಗ ಭಾಷೆ ಮಾತನಾಡುವವರ ಸಂಖ್ಯೆ 2,000 ಮಾತ್ರ ಇದೆ. ಇಂತಹ ಭಾಷೆಗಳನ್ನು ಉಳಿಸಲು ಸ್ಪಷ್ಟ ಭಾಷಾ ನೀತಿ ರೂಪಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಇದರ ವರದಿ ಆಧರಿಸಿ ಸಣ್ಣ ಭಾಷೆಗಳ ಪ್ರಾಧಿಕಾರ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಪ್ರೊ. ಬಿಳಿಮಲೆ ತಿಳಿಸಿದರು.

ಶತಮಾನ ಕಂಡ ಶಾಲೆಗಳ ಅಭಿವೃದ್ಧಿ

ರಾಜ್ಯದಲ್ಲಿ ನೂರು ವರ್ಷ ದಾಟಿದ ನೂರಾರು ಸರ್ಕಾರಿ ಶಾಲೆಗಳಿವೆ. ಇಂತಹ ಆಯ್ದ ಶಾಲೆಗಳನ್ನು ಗುರುತಿಸಿ ಅವುಗಳ ಸಮಗ್ರ ಅಭಿವೃದ್ಧಿಗಾಗಿ ‘ಶತಮಾನ ಶಾಲೆಗಳು’ ಹೆಸರಿನಲ್ಲಿ ವಿಶೇಷ ಯೋಜನೆ ರೂಪಿಸಲಾಗುವುದು. ‘ಸಾಂಸ್ಥಿಕ, ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್ ನಿಧಿ) ಅಡಿಯಲ್ಲಿ ಆರ್ಥಿಕ ನೆರವು ಕೋರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲು ಪ್ರಾಧಿಕಾರ ಆಸಕ್ತಿ ತೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net