ಅಂತರ್ಜಾತಿ ಮದುವೆಯಾದ ಬೆನ್ನಲ್ಲೇ ಕಿಡ್ನಾಪ್ ಆಗಿರುವ ಯುವತಿಯನ್ನು ಪತ್ತೆ ಹಚ್ಚದ ಪೊಲೀಸರ ವಿರುದ್ಧ ನೆಟ್ಟಿಗರ ಆಕ್ರೋಶ!​​

Intercast Marriage
Published on

ಸೇಲಂ: ದಲಿತ ಯುವಕನೊಂದಿಗೆ ಅಂತರ್ಜಾತಿ ವಿವಾಹವಾಗಿ ಅಪರಹರಣಕ್ಕೊಳಗಾಗಿರುವ ಯುವತಿಯನ್ನು ನಾಲ್ಕು ದಿನ ಕಳೆದರೂ ಪೊಲೀಸರು ರಕ್ಷಣೆ ಮಾಡಡಿರುವುದರಿಂದ ಆಕ್ರೋಶಗೊಂಡಿರುವ ಜನರು ಸಾಮಾಜಿಕ ಜಾಲತಾಣದಲ್ಲಿ "ಎಲಮತಿ ಎಲ್ಲಿ" (#WhereIsElamathi) ಎಂಬ ಹ್ಯಾಶ್​ಟ್ಯಾಗ್​ ಮೂಲಕ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನವದಂಪತಿ ಪಿ. ಸೆಲ್ವನ್​(25) ಮತ್ತು ಜೆ. ಎಲಮತಿ(23) ಈರೋಡ್​ ಜಿಲ್ಲೆಯ ಭವಾನಿ ಬಳಿಯ ಗ್ರಾಮದವರು. ಮಾರ್ಚ್​ 9ರಂದು ಸಪ್ತಪದಿ ತುಳಿದಿದ್ದರು. ಡ್ರಾವಿಡರ್​ ವಿದುಥಲೈ ಕಜಗಂ(ಡಿವಿಕೆ) ಸಂಘಟನೆಯ ಸದಸ್ಯ ಕವೈ ಈಶ್ವರನ್ ಮುಂದೆ ನಿಂತು ಸೇಲಂ ಜಿಲ್ಲೆಯ ಕೊಳತೂರ್​ ಬ್ಲಾಕ್​ನ ಕವಲಂದಿಯೂರ್​ನಲ್ಲಿ ಅಂತರ್ಜಾತಿ ವಿವಾಹ ಮಾಡಿಸಿದ್ದರು.

ಮಗಳ ಅಂತರ್ಜಾತಿ ವಿವಾಹದ ಬಗ್ಗೆ ತಿಳಿದ ತಂದೆ ಸೋಮವಾರ ರಾತ್ರಿ ಸುಮಾರು 50 ಮಂದಿಯೊಂದಿಗೆ ಶಸ್ತ್ರಾಸ್ತ್ರಗಳೊಂದಿಗೆ ಬಲವಂತವಾಗಿ ಕವೈ ಈಶ್ವರನ್​ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಬಳಿಕ ನವದಂಪತಿ ತಂಗಿದ್ದ ಸ್ಥಳಕ್ಕೆ ತೆರಳಿ ಈಶ್ವರನ್​ ಸಮೇತ ಮೂವರನ್ನು ಜನನಿಬಿಡ ಪ್ರದೇಶಕ್ಕೆ ಹೊತ್ತೊಯ್ದಿದ್ದರು. ಈ ವೇಳೆ ಈಶ್ವರನ್​ ಮತ್ತು ವಿವಾಹಿತ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ವಿವಾಹಿತೆ ಮಾತ್ರ ಅಂದಿನಿಂದ ನಾಪತ್ತೆಯಾಗಿದ್ದಾಳೆ. ಈ ಸಂಬಂಧ ಸೆಲ್ವನ್ ತನ್ನ​ ಪತ್ನಿಯನ್ನು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದು, ಈಗಾಗಲೇ ಪೊಲೀಸರು ಎಲಮತಿ ತಂದೆ ಹಾಗೂ ಸಂಬಂಧಿಕರು ಸೇರಿದಂತೆ 18 ಮಂದಿಯನ್ನು ಬಂಧಿಸಿದ್ದಾರೆ.

ಆದರೆ, ಅಪಹರಣ ಪ್ರಕರಣ ದಾಖಲಾಗಿ ನಾಲ್ಕು ದಿನ ಕಳೆದಿದ್ದರೂ ಎಲಮತಿಯನ್ನು ಪತ್ತೆ ಹಚ್ಚಲು ವಿಫಲವಾಗಿರುವ ಪೊಲೀಸರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಸುರಿಮಳೆ ಎದುರಾಗಿದೆ. ಎಲಮತಿ ಎಲ್ಲಿ((#WhereIsElamathi) ಎಂಬ ಹ್ಯಾಶ್​ಟ್ಯಾಗ್​ ತಮಿಳುನಾಡಿನಲ್ಲಿ ಟ್ರೆಂಡಿಂಗ್​ ಆಗಿದೆ. ಎಲಮತಿ ಫೋಟೋ ಸಮೇತ ಪೊಲೀಸರನ್ನು ಪ್ರಶ್ನಿಸುತ್ತಾ ಟೀಕಿಸುತ್ತಿದ್ದಾರೆ.

ಅನೇಕ ಅಂತರ್ಜಾತಿ ವಿವಾಹಗಳು ನೇರವೇರಲು ನೆರವು ನೀಡಿರುವ ಗುಣಶೇಖರ್​ ಎಂಬುವರು ಮಾತನಾಡಿ, ಪೊಲೀಸರಿಗೆ ಎಲಮತಿ ಸ್ಥಳದ ಬಗ್ಗೆ ಅರಿವಿಲ್ಲ ಎಂಬುದನ್ನು ನಾನು ನಂಬುವುದಿಲ್ಲ. ಜಾತಿ ರಾಜಕಾರಣದ ಆಟ ನಡೆಯಲು ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಎಲಮತಿಯ ಮದುವೆ ಮುರಿಯಲು ಅವಳ ಸಂಬಂಧಿಕರು ಅವಳನ್ನು ಮನವೊಲಿಸುತ್ತಿದ್ದಾರೆ ಎಂಬ ನಂಬಿಕೆ ಇದೆ. ಸದ್ಯಕ್ಕೆ ಆಕೆಗೆ ಅಪಾಯವಿಲ್ಲ ಎಂದು ಅನಿಸುತ್ತದೆ. ಆದರೆ, ಇದು ಹೀಗೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಕೊಳತೂರು ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಸಿ. ಚಕ್ರಪಾಣಿ ಮಾತನಾಡಿ, ಎಲಮತಿಯನ್ನು ಸಂಬಂಧಿಕರ ಮನೆಯಲ್ಲಿ ಇರಿಸಿರುವ ಬಗ್ಗೆ ಶಂಕೆ ಇದೆ. ಸಂಬಂಧಿಕರ ಫೋನ್​ ಮೂಲಕ ಎಲಮತಿ ಜಾಡನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಎಲಮತಿಯನ್ನು ಮರಳಿ ಕರೆತರುತ್ತೇವೆ ಎಂದು ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net