ನವೋದ್ಯಮಗಳ ಸ್ಥಾಪನೆ; ಕಲ್ಯಾಣ ಕರ್ನಾಟಕದ 19ಸಂಸ್ಥೆಗಳಿಗೆ 4 ಕೋಟಿ ರೂ. ಸಹಾಯಧನ

kharge
Published on

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಮೂಲಕ ಎಲಿವೇಟ್ ಯೋಜನೆಯಡಿ 4 ಕೋಟಿ ರೂ. ಸಹಾಯಧನ ನೀಡಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನವೋದ್ಯಮಗಳನ್ನು ಆರಂಭಿಸುವ ಯುವಕ ಯುವತಿಯರಿಗೆ ಈ ವರ್ಷ 4 ಕೋಟಿ ರೂ. ಧನಸಹಾಯ ಒದಗಿಸುವ ಕಾರ್ಯಕ್ರಮದಡಿ 19 ನವೋದ್ಯಮಿಗಳಿಗೆ ಈಗಾಗಲೆ 2 ಕೋಟಿ ರೂ. ಧನಸಹಾಯ ವಿತರಿಸಲಾಗಿದೆ ಎಂದು ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ 11, ಬಳ್ಳಾರಿ ಮೂರು, ಕೊಪ್ಪಳ ಹಾಗೂ ಬೀದರ್ ಜಿಲ್ಲೆಯ ತಲಾ ಎರಡು ಮತ್ತು ರಾಯಚೂರು ಜಿಲ್ಲೆಯ ಒಂದು ಸೇರಿದಂತೆ 19 ಸಂಸ್ಥೆಗಳನ್ನು ನವೋದ್ಯಮ ಸ್ಥಾಪನೆಗಾಗಿ ಗುರುತಿಸಲಾಗಿದೆ.

ಜೈವಿಕ ತಂತ್ರಜ್ಞಾನ, ಕೃಷಿ, ಪಶುಸಂಗೋಪನೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಬ್ಯಾಂಕಿಂಗ್, ಎವಿಜಿಸಿ ಸೇರಿದಂತೆ ಹಲವಾರು ಕ್ಷೇತ್ರಗಳನ್ನು ನವೋದ್ಯಮಿಗಳು ಆರಿಸಿಕೊಂಡಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.

ಆಯ್ಕೆಯಾಗಿರುವ 19 ಸಂಸ್ಥೆಗಳಲ್ಲಿ 7 ನವೋದ್ಯಮಗಳು ತಲಾ 25 ಲಕ್ಷ ರೂ. ಸಹಾಯಧನ ಮಂಜೂರು ಮಾಡಲಾಗಿದೆ. ಉಳಿದವುಗಳಿಗೆ ತಲಾ 20 ಲಕ್ಷ ರೂ.ಗಳಿಂದ 15 ಲಕ್ಷ ರೂ. ಸಹಾಯಧನ ಮಂಜೂರಾಗಿದೆ ಎಂದೂ ಹೇಳಿದ್ದಾರೆ.

ಸಹಾಯಧನಕ್ಕೆ ಆಯ್ಕೆಗೊಂಡಿರುವ 19 ನವೋದ್ಯಮಿಗಳನ್ನು ಅಭಿನಂದಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕ ಭಾಗದ ಇನ್ನೂ ಹೆಚ್ಚು ಯುವಕ, ಯುವತಿಯರು ನವೋದ್ಯಮಗಳನ್ನು ಆರಂಭಿಸುವ ಮೂಲಕ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಕಾರಣರಾಗಬೇಕೆಂದು ಮನವಿ ಮಾಡಿದ್ದಾರೆ.

ಬೆಂಗಳೂರು ಹಾಗೂ ದಕ್ಷಿಣ ಭಾಗದಲ್ಲಿ ಮಾತ್ರ ನವೋದ್ಯಮಗಳನ್ನು ಆರಂಭಿಸುತ್ತಿದ್ದ ಪರಂಪರೆಯನ್ನು ಬದಲಿಸಿ ಕಲ್ಯಾಣ ಕರ್ನಾಟಕ ಭಾಗದ ಯುವ ಜನತೆಗೂ ಅವಕಾಶ ನೀಡಲಾಗಿದೆ. ಈ ಭಾಗದಲ್ಲಿ ನವೋದ್ಯಮಗಳನ್ನು ಆರಂಭಿಸುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳುವುದರೊಂದಿಗೆ ಸ್ಥಳೀಯ ಅರ್ಹ ಯುವ ಜನಾಂಗಕ್ಕೆ ಉದ್ಯೋಗ ದೊರೆಕಿಸಿಕೊಡಲು ಕಾರಣರಾಗಬೇಕೆಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net