ಪಾಕಿಸ್ತಾನದಲ್ಲಿ ಡ್ರೋನ್ ದಾಳಿಗೆ 4 ಮಕ್ಕಳು ಬಲಿ, ಐವರಿಗೆ ಗಾಯ: ನ್ಯಾಯಕ್ಕಾಗಿ ಪೋಷಕರ ಪ್ರತಿಭಟನೆ | Protest

Protest
Published on

Protest: ವಾಯುವ್ಯ ಪಾಕಿಸ್ತಾನದಲ್ಲಿ ನಡೆದ ಶಂಕಿತ ಡ್ರೋನ್ ದಾಳಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿ, ಐದು ಮಂದಿ ಗಾಯಗೊಂಡಿದ್ದಾರೆ. ಘಟನೆಯ ನಂತರ ನ್ಯಾಯಕ್ಕಾಗಿ ಸಾವಿರಾರು ಜನರು ಮಕ್ಕಳ ಶವಗಳನ್ನು ಮುಖ್ಯ ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ (ಮೇ.20) ನಡೆದಿದೆ.

ಪಾಕಿಸ್ತಾನಿ ತಾಲಿಬಾನ್‌ನ ಭದ್ರಕೋಟೆಯಾಗಿರುವ ಮಿರ್ ಅಲಿಯಲ್ಲಿ ಸೋಮವಾರ ಡ್ರೋನ್​ ದಾಳಿ ನಡೆದಿದ್ದು, ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಮತ್ತು ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

"ನಾವು ಯಾರನ್ನೂ ದೂಷಿಸುತ್ತಿಲ್ಲ, ಆದರೆ ನಮಗೆ ನ್ಯಾಯ ಬೇಕು, ಮತ್ತು ನಮ್ಮ ಮಕ್ಕಳನ್ನು ಕೊಂದವರು ಯಾರು ಎಂದು ಸರ್ಕಾರ ನಮಗೆ ತಿಳಿಸಬೇಕು" ಎಂದು ಸ್ಥಳೀಯ ಬುಡಕಟ್ಟು ಹಿರಿಯ ಮುಫ್ತಿ ಬೈತುಲ್ಲಾ ಆಗ್ರಹಿಸಿದ್ದಾರೆ.

"ನಮ್ಮ ಮುಗ್ಧ ಮಕ್ಕಳನ್ನು ಕೊಂದವರಿಗೆ ಯಾರು ಹೊಣೆ ಎಂದು ತಿಳಿಸುವವರೆಗೂ ನಾವು ಶವಗಳನ್ನು ಹೂಳುವುದಿಲ್ಲ, ನಮಗೆ ನ್ಯಾಯ ಬೇಕು" ಎಂದು ಜನರು ಆಕ್ರೋಶದಿಂದ ಘೋಷಣೆ ಕೂಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ದೇಶದ ಕೆಲವು ಭಾಗಗಳಲ್ಲಿ ನಡೆದ ಮಿಲಿಟರಿ ದಾಳಿಗಳಲ್ಲಿ ನಾಗರಿಕರು ಸಾವನ್ನಪ್ಪಿದ್ದಾರೆ. ಮಾರ್ಚ್‌ನಲ್ಲಿ, ವಾಯುವ್ಯ ನಗರವಾದ ಮರ್ದಾನ್‌ನಲ್ಲಿ ಮನೆಯೊಂದನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದಾಗ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದರು.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮಿರ್ ಅಲಿ ನಗರದಲ್ಲಿ ಪಾಕಿಸ್ತಾನಿ ತಾಲಿಬಾನ್ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳ ಮಧ್ಯೆ ಇತ್ತೀಚಿನ ನಾಗರಿಕ ಸಾವುನೋವುಗಳು ಸಂಭವಿಸಿವೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಎಂದು ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್, ಅಫ್ಘಾನ್ ತಾಲಿಬಾನ್‌ನಿಂದ ಪ್ರತ್ಯೇಕವಾದ ದಂಗೆಕೋರ ಗುಂಪಾಗಿದ್ದು, ಅವರು ಆಗಾಗ್ಗೆ ಈ ಪ್ರದೇಶದಲ್ಲಿ ಸೈನಿಕರನ್ನು ಗುರಿಯಾಗಿಸಿಕೊಳ್ಳುತ್ತಾರೆ.

ಮಿರ್ ಅಲಿ ಮತ್ತು ಅಫ್ಘಾನಿಸ್ತಾನದ ಬಳಿ ಇರುವ ಹತ್ತಿರದ ಜಿಲ್ಲೆಗಳು ಪಾಕಿಸ್ತಾನಿ ತಾಲಿಬಾನ್ ಮತ್ತು ಇತರ ಉಗ್ರಗಾಮಿ ಗುಂಪುಗಳಿಗೆ ಬಹಳ ಹಿಂದಿನಿಂದಲೂ ನೆಲೆಯಾಗಿದ್ದವು. ಇತ್ತೀಚಿನ ಟಿಟಿಟಿಪಿ ಈ ಪ್ರದೇಶದಲ್ಲಿ ದಾಳಿಗಳನ್ನು ಹೆಚ್ಚಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net