

ಅಹಮದಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆರೋಗ್ಯದ ಬಗ್ಗೆ ಕಳೆದ ಕೆಲವು ದಿನಗಳಿಂದ ಇಲ್ಲಸಲ್ಲದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ರೂಮರ್ ಹಬ್ಬಿಸಿದ್ದ ನಾಲ್ವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ರೂಮರ್ಗಳನ್ನು ಗಮನಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ ಸ್ಪಷ್ಟೀಕರಣವನ್ನೂ ಟ್ವೀಟ್ ಮೂಲಕ ನೀಡಿದ್ದರು. ಇದರ ಬೆನ್ನಲ್ಲೇ, ಅವರ ತವರು ರಾಜ್ಯ ಗುಜರಾತ್ನಿಂದ ನಾಲ್ವರ ಬಂಧನದ ಸುದ್ದಿ ಪ್ರಕಟವಾಗಿದೆ.
ಬಂಧಿತರನ್ನು ಫಿರೋಜ್ ಖಾನ್, ಸರ್ಫರಾಜ್, ಸಾಜ್ಜದ್ ಅಲಿ, ಶಿರಾಜ್ ಹುಸೇನ್ ಎಂದು ಗುರುತಿಸಲಾಗಿದ್ದು, ಸೈಬರ್ ಅಪರಾಧದ ಪ್ರಕಾರ ಎಫ್ಐಆರ್ ದಾಖಲಾಗಿದೆ. ಇವರು ಇಲ್ಲ ಸಲ್ಲದ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದುದು ಪತ್ತೆಯಾದ ಕಾರಣ ಅಹಮದಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)