

ಬೆಂಗಳೂರು: ಸಂಚಾರ ನಿಯಮ ಉಲ್ಲಂಸಿದ ವಾಹನ ಸವಾರರ ವಿರುದ್ಧ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೂರ್ವ ಸಂಚಾರ ವಿಭಾಗದ ಪೊಲೀಸರು 870 ಪ್ರಕರಣ ದಾಖಲಿಸಿ 4.35 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ವಾಹನ ಸವಾರರು ಜವಾಬ್ದಾರಿ ಮರೆತು ಸಂಚಾರ ನಿಯಮ ಉಲ್ಲಂಸಿ ಇತರೆ ವಾಹನ ಸವಾರರಿಗೆ ಸಮಸ್ಯೆ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರು ಬಂದಿದ್ದವು. ಹೀಗಾಗಿ, ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವೆಡೆ ಸಂಚಾರ ನಿಯಮ ಉಲ್ಲಂಸಿದ ವಾಹನ ಸವಾರರನ್ನು ತಡೆದು ಶಿಸ್ತುಕ್ರಮದ ಬಿಸಿ ಮುಟ್ಟಿಸಿದ್ದಾರೆ.
ದೋಷಪೂರಿತ ಸೈಲೆನ್ಸರ್, ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ, ನಿಲುಗಡೆ ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ, ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರ, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮತ್ತು ಚಾಲನೆ, ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸದಿರುವುದೂ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಸಿದ ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಅಲ್ಲದೆ, ಪ್ರಯಾಣಿಕರಿಂದ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಿದ ಹಾಗೂ ಪ್ರಯಾಣಿಕರು ಕರೆದ ಸ್ಥಳಕ್ಕೆ ಹೋಗಲು ನಿರಾಕರಿಸಿದ ಆಟೋ ಚಾಲಕರ ವಿರುದ್ಧ ಪೊಲೀಸರು ದೂರು ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ.