

ಬೆಂಗಳೂರು: ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದರೂ, 2011ರ ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ನೇಮಕಾತಿಯನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ವಿಶೇಷ ಕಾಯ್ದೆ ರೂಪಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ ಪಡೆದಿದೆ. ಅದೇ ಆಧಾರದಲ್ಲಿ ಈಗ ವಿವಿಧ ಇಲಾಖೆಗಳ ಹುದ್ದೆಗಳಿಗೆ ನೇಮಕಾತಿ ಮಾಡಿ ಅದೇಶ ಪ್ರಕಟಿಸಿದ್ದು, 15 ದಿನಗಳ ಒಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
ಆದೇಶದಲ್ಲೇನಿದೆ?: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಾಮಾನ್ಯ ಸೇವೆಗೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಸೇರಿದ ಗ್ರೂಪ್ ಎ ವೃಂದದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿಗಳ ಹುದ್ದೆಗೆ 60 ಜನರನ್ನು ಆಯ್ಕೆ ಮಾಡಲಾಗಿದ್ದು, ಇದಕ್ಕಾಗಿ ಮಾ.14ರಂದು ವಿಶೇಷ ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ. ಈ ಪೈಕಿ 39 ಅಭ್ಯರ್ಥಿಗಳಿಗೆ 52,650- 97,100 ರೂ.ಗಳ ವೇತನ ಶ್ರೇಣಿಯನ್ನು ನಿಗದಿಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೂ ಸೂಚನೆ ನೀಡಿದೆ.
ತಾತ್ಕಾಲಿಕ ನೇಮಕಾತಿ: ಇಲಾಖೆ ನೀಡಿರುವ ನೇಮಕಾತಿ ಆದೇಶವು ತಾತ್ಕಾಲಿಕವಾಗಿದ್ದು, ಕಾಲಕಾಲಕ್ಕೆ ಜಾರಿಯಲ್ಲಿರುವ, ಜಾರಿಗೆ ಬರುವ ನಿಯಮ ಹಾಗೂ ಅದೇಶಗಳಿಗೆ ಒಳಪಟ್ಟಿರುತ್ತದೆ ಎಂದು ಇಲಾಖೆ ಹೇಳಿದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಟ್ಟಿಯಲ್ಲಿರುವಂತೆ ಜ್ಯೇಷ್ಠತಾ ಕ್ರಮಾಂಕವನ್ನು ನಿಗದಿಪಡಿಸಲಾಗಿದೆ.
ಸರ್ಕಾರದ ಜಾಣನಡೆ: ನ್ಯಾಯಾಲಯಗಳ ಆದೇಶದ ಹೊರತಾಗಿಯೂ ಆಯ್ಕೆಪಟ್ಟಿಯನ್ನು ಹಿಂಪಡೆಯಲಾಗಿಲ್ಲ ಅಥವಾ ರದ್ದುಗೊಳಿಸಿಲ್ಲ ಎಂಬ ತಾಂತ್ರಿಕ ಅಂಶ ಮುಂದಿಟ್ಟುಕೊಂಡು ಸರ್ಕಾರವು ವಿಶೇಷ ಕಾಯ್ದೆ ರೂಪಿಸಿ ಅಕ್ರಮವನ್ನು ಸಕ್ರಮಗೊಳಿಸಿದೆ. ಅಂತೆಯೇ ಸರ್ಕಾರದ ನಡೆಯನ್ನು ಪ್ರಶ್ನಿಸಿ ಆರಂಭದಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ನಂತರ ಹೈಕೋರ್ಟ್ಗೂ ನೊಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ವಿಚಾರಣೆ ಹಂತದಲ್ಲಿವೆ. ಹೀಗಿದ್ದರೂ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿವೆ ಎಂಬ ಷರತ್ತಿನೊಂದಿಗೆ ನೇಮಕಾತಿನ ಆದೇಶ ನೀಡಿ ಸರ್ಕಾರ ಜಾಣನಡೆ ಅನುಸರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.