ಚಾಲಕನ ನಿಯಂತ್ರಣ ತಪ್ಪಿ 70 ಅಡಿ ಆಳಕ್ಕೆ ಬಿದ್ದ ಬಸ್; 38 ಜನರಿಗೆ ಗಾಯ, 2 ಸಾವು

Bus
Published on

ಡೆಹ್ರಾಡೂನ್​: ಮಸ್ಸೂರಿ-ಡೆಹ್ರಾಡೂನ್ ರಸ್ತೆಯಲ್ಲಿ ಕಂದಕಕ್ಕೆ ಬಸ್ ಬಿದ್ದು, 38 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರ (ಐಟಿಬಿಪಿ) ಸಹಾಯದಿಂದ ಗಾಯಾಳುಗಳನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಮಸ್ಸೂರಿ ಪೊಲೀಸರು ತಿಳಿಸಿದ್ದಾರೆ.

ಐಟಿಬಿಪಿ ಕ್ಯಾಂಪ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ 70 ಮೀಟರ್ ಆಳದ (230 ಅಡಿ) ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ 16 ಮಹಿಳೆಯರು, 19 ಪುರುಷರು ಮತ್ತು 5 ಮಕ್ಕಳು ಪ್ರಯಾಣಿಸುತ್ತಿದ್ದರು. ಈ ದುರ್ಘಟನೆಯಿಂದ ಮಸ್ಸೂರಿಯ ತಾಯಿ-ಮಗಳು ಸಾವನ್ನಪ್ಪಿದ್ದಾರೆ.

ಅತಿವೇಗದ ಚಾಲನೆಯಿಂದ, ರಸ್ತೆ ತಿರುವಿನಲ್ಲಿ ಚಾಲಕನಿಗೆ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net