

ಹುಣಸೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆಗೆ ಆದಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಡೀಡ್ ಸಂಸ್ಥೆಯ ಆವರಣದಲ್ಲಿ ಗುರುವಾರ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಮತ್ತು ಬುಡಕಟ್ಟು ಕೃಷಿಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಂಹಿತೆಯ ವಿರುದ್ಧ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಅದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ, ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ಅನುಚ್ಛೇದ 371ರಲ್ಲಿ ಆದಿವಾಸಿಗಳಿಗೆ ನೀಡಿರುವ ರಕ್ಷಾ ಕವಚವನ್ನು ಇಲ್ಲವಾಗಿಸಿ ಆದಿವಾಸಿಗಳನ್ನು ಮತ್ತಷ್ಟು ದುರ್ಬಲರನ್ನಾಗಿ ಮಾಡಲಿದೆ. ಸಂವಿಧಾನದ 371ನೇ ವಿಧಿ ಅನ್ವಯ ಆದಿವಾಸಿಗಳಿಗೆ ಅವರ ಪರಂಪರಾನುಗತ ಹಾಗೂ ರೂಢಿಯಲ್ಲಿರುವ ವಿಧಿವಿಧಾನಗಳನ್ನು ಆಚರಣೆಯಲ್ಲಿ ಮುಂದುವರಿಸುವ ಹಕ್ಕನ್ನು ಹೊಂದಿದ್ದಾರೆ. 5 ಮತ್ತು 6ನೇ ಅನುಸೂಚಿತ ಪ್ರದೇಶದ ಅಡಿ ಸ್ವಯಂಆಡಳಿತ ಹಾಗೂ ತಾವು ವಾಸಿಸುವ ಪ್ರದೇಶಗಳನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಈ ಎಲ್ಲ ಅವಕಾಶಗಳನ್ನು ನಾವು ಕಳೆದುಕೊಳ್ಳಲಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ಅನುಸೂಚಿತ ಪ್ರದೇಶಗಳಿಗೆ ವಿಸ್ತರಿಸಲ್ಪಟ್ಟ ಪೇಸ ಕಾಯ್ದೆ 1996ರ ಅನ್ವಯ ಪಾರಂಪರಿಕ ಗ್ರಾಮಸಭೆಗಳಿಗೆ ಮಹತ್ತರವಾದ ಅಧಿಕಾರಗಳನ್ನು ನೀಡಿರುವುದರಿಂದ ಆದಿವಾಸಿಗಳ ಹಿತರಕ್ಷಣೆಗೆ ರಕ್ಷಾ ಕವಚವಾಗಿದೆ. ಇಂಥ ರಕ್ಷಾ ಕವಚವನ್ನು ನುಚ್ಚುನೂರು ಮಾಡಿ ಆದಿವಾಸಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಬಾರದೆಂದು ಆಗ್ರಹಿಸಿದರು.
ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಸಿದ್ದೇಗೌಡ, ದಲಿತ ಚಳವಳಿಯ ನವ ನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ, ಡೀಡ್ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಗಿರಿಜಾ, ಆದಿವಾಸಿ ಪಾರ್ಲಿಮೆಂಟ್ ಸಮಿತಿಯ ಸದಸ್ಯರಾದ ವಿಠಲ್ ನಾಣಚ್ಚಿ, ಬೊಮ್ಮಿ, ಜಯಪ್ಪ ಮತ್ತು ಶಿವಣ್ಣ ಹಾಗೂ ಡೀಡ್ ಸಂಸ್ಥೆಯ ಕಾರ್ಯಕರ್ತರಾದ ಎ.ಪ್ರಕಾಶ್, ಶಾರದ ವಳಗೆರೆ ಮತ್ತು ರಕ್ಷಿತಾ.ಎಚ್.ಎಸ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.