

ಬೆಂಗಳೂರು: ರಾಜ್ಯದಲ್ಲಿ ದಿನಕ್ಕೆ ನಾಲ್ವರು ರೈತರು, ಐವರು ಗೃಹಿಣಿಯರು, ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 37 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ವರ್ಷದಿಂದ ವರ್ಷಕ್ಕೆ ಶೇ. 8 ಏರಿಕೆಯಾಗುತ್ತಿದೆ.
2022ರಲ್ಲಿ ರಾಷ್ಟ್ರದಲ್ಲಿ 1,70,924 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕರ್ನಾಟಕದಲ್ಲಿ 13,606 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ(ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ. ಉದ್ಯೋಗ ಆಧಾರದ ಮೇಲೆ ಆತ್ಮಹತ್ಯೆ ಪ್ರಕರಣಗಳನ್ನು ವಿಶ್ಲೇಷಣೆ ಮಾಡಿದಾಗ ರಾಜ್ಯದಲ್ಲಿ ಗೃಹಿಣಿಯರೇ (1,893) ಅತೀ ಹೆಚ್ಚು ಸಾವಿಗೆ ಶರಣಾಗಿದ್ದಾರೆ. ಇದಾದ ಮೇಲೆ 1,466 (ಗಂ-1239;ಹೆ-227) ವೇತನದಾರು, ರೈತರು 1,323 (ಗಂ-1278; ಹೆ-45) ಹಾಗೂ 734 (ಗಂ-386;ಹೆ-348) ವಿದ್ಯಾರ್ಥಿಗಳು ಸೇರಿದಂತೆ 13,606 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇಶದಲ್ಲಿ ಒಟ್ಟಾರೇ ಪ್ರಕರಣಗಳಲ್ಲಿ ಶೇ.8 ರಾಜ್ಯದಲ್ಲಿ ವರದಿ ಆಗಿದ್ದು, 2021ರಲ್ಲಿ13,056 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು. 2022ಕ್ಕೆ ಶೇ.4.2 ಏರಿಕೆಯಾಗಿದ್ದು, ದೇಶದಲ್ಲಿ 4ನೇ ಸ್ಥಾನ ಎಂಬ ಕುಖ್ಯಾತಿಗೆ ಒಳಗಾಗಿರುವುದು ಆತಂಕದ ವಿಚಾರವಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಸಮಯ, ಸಂದರ್ಭ ಮತ್ತು ಕಾರಣಗಳು ಇರಲಿವೆ. ಕಾರಣಗಳನ್ನ ವಿಶ್ಲೇಷಣೆ ಮಾಡಿದಾಗ ಪರೀಕ್ಷೆಯಲ್ಲಿ ೇಲ್ ಆಗಿ 162 ವಿದ್ಯಾರ್ಥಿಗಳು, ಕೌಟುಂಬಿಕ ಕಲಹದಿಂದ 3,779 (ಗಂ-2462; ಹೆ-1317) ಮಂದಿ, ಆರ್ಥಿಕ ಸಂಕಷ್ಟದಿಂದ 1,401 ಮಂದಿ (ಗಂ-1335, ಹೆಂ-66) ಆತ್ಮಹತ್ಯೆ ಮಾಡಿಕೊಂಡಿರುವ ವರದಿಯಾಗಿವೆ. ಪ್ರೀತಿ ಪ್ರೇಮದ ವಿಚಾರವಾಗಿ ರಾಜ್ಯದಲ್ಲಿ 250 ಪುರುಷರು, 103 ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 158 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಷ್ಟ್ರದ 53 ನಗರಗಳ ಪೈಕಿ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಆತ್ಮಹತ್ಯೆ ಕೇಸುಗಳು ದಾಖಲಾಗಿವೆ. 2,313 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, 2ನೇ ಸ್ಥಾನದಲ್ಲಿದೆ. 2021ರಲ್ಲಿ 2,292 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಶೇ.0.9 ಏರಿಕೆಯಾಗಿದೆ.
ಇನ್ನೂ ದೆಹಲಿ ನಗರದಲ್ಲಿ 3,367 (ಶೇ.12.8) ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ಚೆನ್ನೈ 1,581 (ಶೇ.6.0), ಮುಂಬೈ ,1501 (ಶೇ.5.7), ಸೂರತ್ 1,004 (ಶೇ.3.8) ಮತ್ತು ಪುಣೆ 1,003 (ಶೇ.3.8) ಆನಂತರ ಸ್ಥಾನದಲ್ಲಿವೆ.
ನಾಗರೀಕ ಸಮಾಜಕ್ಕೆ ಕಂಠಕವಾಗಿರುವ ಮಾದಕ ದ್ರವ್ಯ ಸಾಗಾಣಿಕೆ, ಮಾರಾಟ ಮತ್ತು ಸೇವನೆ ಸಹ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ. ಡ್ರಗ್ಸ್ ಮತ್ತು ಮದ್ಯಪಾನ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಸಾವಿನ ನಿರ್ಧರ ತೆಗೆದುಕೊಳ್ಳುತ್ತಿದ್ದಾರೆ.
2022ರಲ್ಲಿ ರಾಜ್ಯದಲ್ಲಿ1,389 ಪುರುಷರು, 16 ಮಹಿಳಾ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಆಗಿವೆ. ಬೆಂಗಳೂರು ನಗರದಲ್ಲಿಯೂ ಐವರು ಮಹಿಳೆಯರು ಸೇರಿದಂತೆ 145 ವ್ಯಸನಿಗಳು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ 13,606 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 48 ಮಂದಿ ನಿದ್ದೆ ಮಾತ್ರೆ, 1,041 ನೀರಿಗೆ ಹಾರಿ, 130 ಬೆಂಕಿ ಹಚ್ಚಿಕೊಂಡು, 8408 ನೇಣು ಬಿಗಿದುಕೊಂಡು, 2779 ವಿಷ ಕುಡಿದು, 90 ಮಹಡಿಯಿಂದ ಜಿಗಿದು ಮತ್ತು 739 ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸಾಮೂಹಿಕ ಆತ್ಮಹತ್ಯೆ7 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 13 ವಿವಾಹಿತರು, 3 ಅವಿವಾಹಿತರು ಅಸುನೀಗಿದ್ದಾರೆ. ತಮಿಳುನಾಡಿನಲ್ಲಿ 90 ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 192 ಮಂದಿ ಪ್ರಾಣ ಬಿಟ್ಟಿದ್ದಾರೆ.