ಜಿಂದಾಲ್​ಗೆ 3667 ಎಕರೆ ಜಮೀನು ಮಾರಾಟ: ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ, ಇಲಾಖಾವಾರು ಸಂದರ್ಶನಕ್ಕೆ ಗರಿಷ್ಠ 50 ಅಂಕ ಮಿತಿ

Jindal
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ, ಇತರ ಸಚಿವರು.
Published on

ಬೆಂಗಳೂರು: ಜಿಂದಾಲ್ ಸ್ಟೀಲ್ ವರ್ಕ್ಸ್ ಕಂಪನಿಗೆ ಬಹು ಕೋಟಿ ರೂ.ಗಳ ಮೌಲ್ಯದ 3667 ಎಕರೆ ಜಮೀನು ಮಾರಾಟ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಕರೊನಾ ಸಂಕಷ್ಟ ಕಾಲದಲ್ಲೇ ಪ್ರಮುಖ ತೀರ್ಮಾನ ತೆಗೆದುಕೊಂಡಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಆದರೆ ಎಕರೆವಾರು ಶುದ್ಧಕ್ರಯಕ್ಕೆ ನಿಗದಿಪಡಿಸಿದ ಮೊತ್ತವೆಷ್ಟು ಎಂಬ ಪ್ರಶ್ನೆಗೆ ನಿಖರವಾದ ಉತ್ತರ ನೀಡಲಿಲ್ಲ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2005.58 ಎಕರೆ ಹಾಗೂ ತೋರಣಗಲ್ಲು, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕರೆ ಭೂಮಿಗೆ, ಸಚಿವ ಸಂಪುಟದ ಉಪ ಸಮಿತಿ ಶಿಫಾರಸಿನಂತೆ ಮೆ| ಜೆಎಸ್​ಡಬ್ಲ್ಯು ಸಂಸ್ಥೆಗೆ ಶುದ್ಧಕ್ರಯಪತ್ರಗಳನ್ನು ನೀಡಲು ಸಭೆ ಸಮ್ಮತಿಸಿದೆ.

ಅಲ್ಲಿದ್ದಾಗ ಏಕೆ? ಇಲ್ಲಿಗೆ ಬಂದ ಮೇಲೆ ಓಕೆ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದೇ ನಿರ್ಧಾರ ತೆಗೆದುಕೊಂಡಾಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಪ್ರಬಲವಾಗಿ ವಿರೋಧಿಸಿ, ಬಿಎಸ್​ವೈ ನೇತೃತ್ವದಲ್ಲಿಯೇ ಹೋರಾಟ ನಡೆಸಿತ್ತು. ಅಧಿಕಾರಕ್ಕೆ ಬಂದ ಮೇಲೆ ನಿಲುವು ಬದಲಿಸಿದ್ದೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಬೊಮ್ಮಾಯಿ ಪ್ರತಿಕ್ರಿಯಿಸಿ, ಜಿಂದಾಲ್​ಗೆ ನೀಡಿದ್ದ ಈ ಜಮೀನಿನ ಗುತ್ತಿಗೆ ಅವಧಿ 2006ರಲ್ಲಿ ಪೂರ್ಣಗೊಂಡಿದ್ದು, ಒಪ್ಪಂದದ ಪ್ರಕಾರ ಶುದ್ಧಕ್ರಯಕ್ಕೆ ನೀಡಬೇಕಾಗಿದೆ.

ಮೈಸೂರು ಮಿನರಲ್ಸ್ ಸಂಸ್ಥೆಗೆ ಜಿಂದಾಲ್ ಬಾಕಿ ಪಾವತಿ ವ್ಯಾಜ್ಯವಿತ್ತು. ಆ ಹಂತದಲ್ಲಿ ಜಮೀನು ಮಾರಾಟ ಮಾಡಲು ಆಗಿನ ಸಮ್ಮಿಶ್ರ ಸರ್ಕಾರ ನಿರ್ಧರಿಸಿದ್ದನ್ನು ಪ್ರತಿಪಕ್ಷವಾಗಿ ಬಿಜೆಪಿ ವಿರೋಧಿಸಿತ್ತು. ನಂತರದ ದಿನಗಳಲ್ಲಿ ಕೆಳ ನ್ಯಾಯಾಲಯದಿಂದ ಹೈಕೋರ್ಟ್​ವರೆಗೆ ವ್ಯಾಜ್ಯದ ವಿಚಾರಣೆ ನಡೆದು, ಎಂಎಂಎಲ್ ವಾದವು ವಜಾಗೊಂಡಿದೆ. ಆದರೂ ಜಿಂದಾಲ್ ವಿರುದ್ಧ ಕಾನೂನು ಹೋರಾಟ ಮುಂದುವರಿಸಲು ಸರ್ಕಾರ ತೀರ್ವನಿಸಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅಡ್ವೋಕೇಟ್ ಜನರಲ್ ಮೂಲಕ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಸದ್ಯಕ್ಕೆ ಬಾಕಿಯಿದ್ದ ವ್ಯಾಜ್ಯ ಬಗೆಹರಿದ ಕಾರಣ ಜಿಂದಾಲ್ ಸಂಸ್ಥೆಗೆ 3,667.31 ಎಕರೆ ಜಮೀನು ಮಾರಾಟ ಮಾಡಲು ಸರ್ಕಾರ ಅಸ್ತು ಎಂದಿದೆ ಎಂದು ಸಮರ್ಥಿಸಿಕೊಂಡರು.

ಭಾರಿ ವಿವಾದ ಸೃಷ್ಟಿಸಿದ್ದ ಪ್ರಕರಣ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಜಿಂದಾಲ್​ಗೆ ಭೂಮಿ ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡಾಗ ಭಾರಿ ವಿವಾದ ಸೃಷ್ಟಿಯಾಗಿತ್ತು. ಬಿಜೆಪಿ ಪ್ರಬಲ ವಿರೋಧದಿಂದಾಗಿ ಜಮೀನು ವಿಕ್ರಯ ನಿರ್ಧಾರ ತಾತ್ಕಾಲಿಕವಾಗಿ ಕೈಬಿಟ್ಟು, ಸಚಿವ ಸಂಪುಟದ ಉಪ ಸಮಿತಿ ರಚಿಸಿತ್ತು. ಈ ಸಮಿತಿ ವರದಿ ನೀಡಿದ ಬಳಿಕ ಮುಂದಿನ ಕ್ರಮವೆಂದು ಸ್ಪಷ್ಟಪಡಿಸಿದ ಬಳಿಕ ವಿವಾದ ಶಮನವಾಗಿತ್ತು. ರಾಷ್ಟ್ರೀಯ ಹೆದ್ದಾರಿ ನಿರ್ವಣಕ್ಕೆ ಸ್ವಾಧೀನಪಡಿಸಿಕೊಳ್ಳುವ ಎಕರೆ ಭೂಮಿಗೆ 30 ಲಕ್ಷ ರೂ.ದಿಂದ 1 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ಆದರೆ, ಜಿಂದಾಲ್ ಸಂಸ್ಥೆಯು 1 ಎಕರೆಗೆ 1.22 ಲಕ್ಷ ರೂ.ನಂತೆ ಗುತ್ತಿಗೆ ಪಡೆದಿದ್ದು, ಅದೇ ದರದಲ್ಲಿ ಮಾರಾಟ ಮಾಡುವುದು ಸರಿಯಲ್ಲವೆಂದು ಬಿಜೆಪಿ ವಾದಿಸಿತ್ತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುದೀರ್ಘ ಪತ್ರ ಬರೆದು, ಎಚ್​ಡಿಕೆ ಮತ್ತು ಆಗಿನ ಬೃಹತ್ ಕೈಗಾರಿಕೆ ಸಚಿವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದರು.

ಆನಂದ್ ಸಿಂಗ್ ಗೈರು!: ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡುವ ನಿರ್ಣಯ ತೆಗೆದುಕೊಂಡ ಸಚಿವ ಸಂಪುಟ ಸಭೆಗೆ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವ ಆನಂದ್ ಸಿಂಗ್ ಗೈರು ಹಾಜರಾಗಿದ್ದು ಗಮನಾರ್ಹ. ಅಧಿಕೃತ ಮಾಹಿತಿ ಪ್ರಕಾರ ಕರೊನಾ ಪರಿಸ್ಥಿತಿ, ವ್ಯವಸ್ಥೆಗಳ ಪರಿಶೀಲನೆಗಾಗಿ ಆನಂದ್ ಸಿಂಗ್ ಏ.26ರಿಂದ 29ರವರೆಗೆ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ಜಿಂದಾಲ್​ಗೆ ಭೂಮಿ ವಿಕ್ರಯ ಸಂಬಂಧ ಅವರ ಪ್ರತಿಕ್ರಿಯೆಗೆ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.

ಕಾಲಿಗೆ ಮುಗಿಯುತ್ತೇನೆ ಲಾಕ್​ಡೌನ್ ಮಾಡಿಬಿಡಿ: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ. ಅಗತ್ಯಕ್ಕನುಗುಣವಾಗಿ ಆಕ್ಸಿಜನ್ ಒದಗಿಸಲು ಆಗುತ್ತಿಲ್ಲ. ಜನ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕೂಡಲೆ ಲಾಕ್​ಡೌನ್ ಮಾಡಿ ಎಂದು ಸಂಪುಟ ಸಭೆಯಲ್ಲಿ ಸಚಿವರು ಸಿಎಂ ಯಡಿಯೂರಪ್ಪ ಅವರಿಗೆ ಕೈ ಮುಗಿದು ಕೇಳಿದ ಪ್ರಸಂಗ ನಡೆದಿದೆ. ಆಸ್ಪತ್ರೆಯವರು ಮಾತು ಕೇಳುತ್ತಿಲ್ಲ, ಎಲ್ಲೂ ಬೆಡ್ ಲಭ್ಯವಿಲ್ಲ. ಪರಿಸ್ಥಿತಿ ಕೈ ಮೀರಿದೆ. ಇನ್ನೂ ಸುಮ್ಮನಿದ್ದರೆ ಬಹಳ ಕಷ್ಟವಿದೆ, ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕು, ಬೇಕಿದ್ದರೆ ಕಾಲಿಗೆ ಮುಗಿಯುತ್ತೇನೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರೆನ್ನಲಾಗಿದೆ. ಕರ್ಫ್ಯೂ ಇನ್ನಷ್ಟು ಬಿಗಿ ಗೊಳಿಸಬೇಕೆಂಬ ವಿಚಾರ ಚರ್ಚೆಗೆ ಬಂದಾಗ ಹಲವು ಸಚಿವರು ಲಾಕ್​ಡೌನ್ ಸೂಕ್ತ ಎಂಬ ಅಭಿಪ್ರಾಯ ನೀಡಿದ್ದಾರೆ. ಆದರೆ, ಕಾರ್ವಿುಕ ಸಚಿವ ಶಿವರಾಂ ಹೆಬ್ಬಾರ್ ಮಾತ್ರ ಲಾಕ್​ಡೌನ್ ಮಾಡಿದರೆ ಕಾರ್ವಿುಕರಿಗೆ ಬಹಳ ಕಷ್ಟವಾಗುತ್ತದೆ, ಆ ತೀರ್ಮಾನ ಮಾಡಬೇಡಿ ಎಂದು ಗೋಗರೆದರೆಂದು ತಿಳಿದುಬಂದಿದೆ.

ಬಂಡಾಯದ ಸೊಲ್ಲಡಗಿತೆ?: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಆನಂದ್​ಸಿಂಗ್ ರಾಜೀನಾಮೆ ನಾಂದಿ ಹಾಡಿತ್ತು. ಜಿಂದಾಲ್​ಗೆ ಜಮೀನು ಮಾರಾಟಕ್ಕೆ ವಿರೋಧ, ವಿಜಯನಗರ ಜಿಲ್ಲೆ ರಚನೆ ಸೇರಿ ಹಲವು ಕಾರಣಗಳನ್ನು ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆಯ ನಿರ್ಧಾರ ಸಮರ್ಥಿಸಿಕೊಂಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಚಿವರಾದರು, ಪಿ.ಕೆ.ನಾಯಕನ ಹಳ್ಳಿ ಬೃಹತ್ ಏತ ನೀರಾವರಿ ಯೋಜನೆ ಮಂಜೂರಾಯಿತು. ಬಿಎಸ್​ವೈ ಕೊಟ್ಟ ಮಾತಿನಂತೆ ವಿಜಯನಗರ ಜಿಲ್ಲೆ ರಚಿಸಿ ಅಧಿಕೃತ ಮುದ್ರೆಯೊತ್ತಿದರು. ಇಷ್ಟಕ್ಕೆ ಆನಂದ್ ಸಿಂಗ್ ತೃಪ್ತರಾಗಿದ್ದರಿಂದ ಬಂಡಾಯದ ಸೊಲ್ಲು ಅಡಗಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net