35 years family reunion: ಸುಮಾರು 35 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ಒಡಿಶಾದ ಮಹಿಳೆ ಕೊನೆಗೂ ತನ್ನವರನ್ನು ಸೇರಿದ್ದಾರೆ. ಒಂದು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರು ಆಕೆಯನ್ನು ನೋಡಿ ಭಾವುಕರಾದರು. ಆಕೆಗೂಗೂ ತನ್ನವರ ಜತೆ ಮಾತನಾಡಿದ ಕ್ಷಣ ಕಂಬನಿ ತರಿಸಿತು.
ಪ್ರಮಿಳಾ ಒಡಿಶಾದ ಕೇಂದ್ರಾಪಾರ ಜಿಲ್ಲೆಯ ಅಲುಪುಆ ಪಂಚಾಯತ್‌ನವರು. ದಾಖಲೆಗಳಲ್ಲಿ ರಾಮ್ಕಲಿ ಮಲಿಕ್ ಎಂಬ ಹೆಸರೂ ಇತ್ತು. ‘ಮಿಷನ್ ಅಪ್ನೋ ತಕ್’ ಮೂಲಕ ಕುಟುಂಬದ ಹುಡುಕಾಟ ಶುರುವಾಗಿದ್ದು, ಭಂಗ್ರೋಟು ವೃದ್ಧಾಶ್ರಮದಲ್ಲಿ ಅಧಿಕಾರಿಗಳು ಪ್ರಮಿಳಾ ಜತೆ ಮಾತಾಡಿದಾಗ ಮಹತ್ವದ ಸುಳಿವು ಸಿಕ್ಕಿತು.
ಪ್ರಮಿಳಾ ನೆನಪಿಸಿಕೊಂಡ ಕಟಕ್ ಸೇರಿದಂತೆ ಒಡಿಶಾದ ಸ್ಥಳಗಳ ಹೆಸರುಗಳು ಹುಡುಕಾಟಕ್ಕೆ ಸಹಾಯ ಮಾಡಿದವು. ಕೈ ಮೇಲಿದ್ದ ಒಡಿಯಾ ಭಾಷೆಯ ಹೆಸರಿನ ಟ್ಯಾಟೂ ಕೂಡ ಕುಟುಂಬ ಪತ್ತೆಗೆ ಪ್ರಮುಖ ಸುಳಿವಾಯಿತು.
ಪ್ರಮಿಳಾ ಜತೆಗಿನ ಮಾತುಕತೆಯ ವಿಡಿಯೋಗಳನ್ನು ಸಾಮಾಜಿಕ ಕಾರ್ಯಕರ್ತೆ ಹಾಗೂ ‘ಇಂಡಿಯಾ ಕೇರ್ ವಾಲಂಟಿಯರ್ ನೆಟ್‌ವರ್ಕ್’ ರಾಷ್ಟ್ರೀಯ ಸಂಯೋಜಕಿ ಸಬಿತಾ ಚಂದಾ ಅವರಿಗೆ ಕಳುಹಿಸಲಾಯಿತು. ಅವರ ಜತೆಗೆ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ, ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಹಾಗೂ ಒಡಿಶಾ ಪೊಲೀಸರು ಹುಡುಕಾಟಕ್ಕೆ ನೆರವಾದರು.
ಪ್ರಮಿಳಾ ಒಡಿಶಾದಿಂದ ಹಿಮಾಚಲಕ್ಕೆ ಹೇಗೆ ಬಂದರು ಎಂಬುದು ಇನ್ನೂ ತಿಳಿದುಬಂದಿಲ್ಲ. 2011ರಿಂದ 2018ರವರೆಗೆ ಶಿಮ್ಲಾದ ಆರೋಗ್ಯ ಕೇಂದ್ರದಲ್ಲಿದ್ದು, ಬಳಿಕ ನಾರಿ ನಿಕೇತನ ಹಾಗೂ ಭಂಗ್ರೋಟು ವೃದ್ಧಾಶ್ರಮದಲ್ಲಿ ಉಳಿದಿದ್ದರು. ಅವರು ಕಾಣೆಯಾಗಿದ್ದಾಗ ಮಗನಿಗೆ ಒಂದೂವರೆ ವರ್ಷ; ಈಗ ಆತನಿಗೆ 37. ಸುಮಾರು 35 ವರ್ಷಗಳ ಬಳಿಕ ತಾಯಿ-ಮಗ ಮತ್ತೆ ಸಂಪರ್ಕಕ್ಕೆ ಬಂದಿದ್ದಾರೆ.
‘ಮಿಷನ್ ಅಪ್ನೋ ತಕ್’ ಮೂಲಕ ಹಲವು ವರ್ಷಗಳಿಂದ ಬೇರ್ಪಟ್ಟ ಕುಟುಂಬಗಳನ್ನು ಮತ್ತೆ ಒಂದುಗೂಡಿಸಲಾಗುತ್ತಿದೆ. ಪಂಜಾಬ್‌ನ ಮಮತಾ, ತಮಿಳುನಾಡಿನ ಸೈರಾ ಬಾನು, ಕರ್ನಾಟಕದ ರಮಣಾ ಹಾಗೂ ಸಕ್ಕಮ್ಮ ಅವರನ್ನೂ ಈ ಪ್ರಯತ್ನದ ಮೂಲಕ ಕುಟುಂಬದ ಜೊತೆ ಸೇರಿಸಲಾಗಿದೆ. (ಏಜೆನ್ಸೀಸ್)