

ನವದೆಹಲಿ: ಹರಿಯಾಣದಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾಗಿದ್ದು ಮಾರ್ಚ್ 16ರಂದು. ಮಲೇಷ್ಯಾ ಮತ್ತು ಇಂಡೋನೇಷ್ಯಾಕ್ಕೆ ಭೇಟಿ ನೀಡಿ ಭಾರತಕ್ಕೆ ವಾಪಸಾದ, ಗುರುಗ್ರಾಮ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಮಹಿಳೆಯಲ್ಲಿ ಸೋಂಕು ಕಂಡುಬಂದಿತ್ತು. ಇದಾದ ಬಳಿಕ ರಾಜ್ಯದ ಇತರೆಡೆಗಳಲ್ಲೂ ಸೋಂಕಿನ ಪ್ರಕರಣಗಳು ಕಂಡುಬಂದಿವೆ. ರಾಜ್ಯದಲ್ಲಿ ಈವರೆಗೆ ಒಟ್ಟು 347 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, 235 ಮಂದಿ ಗುಣಮುಖರಾಗಿದ್ದಾರೆ ಮತ್ತು 4 ಮಂದಿ ಬಲಿಯಾಗಿದ್ದಾರೆ.
ಗುರುಗ್ರಾಮ ಮತ್ತು ನೂಹ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಕರೊನಾ ಸೋಂಕಿತರಿದ್ದಾರೆ. 1920ರ ದಶಕದಲ್ಲಿ ತಬ್ಲಿಘಿ ಜಮಾತ್ ಸಂಘಟನೆ ಹುಟ್ಟಿದ್ದು ಇದೇ ನೂಹ್ ಜಿಲ್ಲೆಯಲ್ಲಿ. 2016ರ ತನಕ ಈ ಜಿಲ್ಲೆಯನ್ನು ಮೇವಾಡ್ ಎಂದು ಕರೆಯಲಾಗುತ್ತಿತ್ತು, ನಂತರ ಹೆಸರು ಬದಲಿಸಲಾಯಿತು. ಜಮಾತ್ ಸಂಘಟನೆಗೆ ಸೇರಿದ ಪುರಾತನ ಬಡಾ ಮಸೀದಿ ಇಲ್ಲಿದ್ದು, ಜಮಾತ್ಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುತ್ತವೆ. ರಾಜಸ್ಥಾನ ಮತ್ತು ಉತ್ತರಪ್ರದೇಶದ ಗಡಿ ಭಾಗದಲ್ಲಿರುವ ಈ ಹಿಂದುಳಿದ ಜಿಲ್ಲೆಯಲ್ಲಿ 58 ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 50 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಎಂಟು ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುಗ್ರಾಮದಲ್ಲಿ 57 ಕರೊನಾ ಪ್ರಕರಣಗಳು ಪತ್ತೆಯಾಗಿವೆ ಮತ್ತು 38 ಮಂದಿ ಗುಣಮುಖರಾಗಿದ್ದಾರೆ. ಹರಿಯಾಣದ ಗುರುಗ್ರಾಮ ಮತ್ತು ಫರಿದಾಬಾದ್ಗಳು ರಾಜಧಾನಿ ದೆಹಲಿಯ ಗಡಿ ಭಾಗದ ಮಹಾನಗರಗಳಾದ ಕಾರಣ ಅಲ್ಲಿಂದ ಸಾವಿರಾರು ಮಂದಿ ದೆಹಲಿಗೆ ಬಂದು ಕೆಲಸ ಮಾಡುತ್ತಾರೆ. ಹಾಗೇ ನೂರಾರು ಮಂದಿ ಆರೋಗ್ಯ ಸಿಬ್ಬಂದಿ ಕೂಡ ಗಡಿ ದಾಟಿ ದೆಹಲಿಗೆ ಬರಬೇಕು. ಆದರೆ, ಏ.18ರಂದು ಹರಿಯಾಣ ಸರ್ಕಾರ ಗುರುಗ್ರಾಮ-ದೆಹಲಿ ಗಡಿ ಮುಚ್ಚಿರುವುದರಿಂದ ಗಡಿ ದಾಟಿ ದೆಹಲಿಗೆ ಬರುವುದೇ ಅನೇಕ ಮಂದಿಗೆ ಹರಸಾಹಸದ ಕೆಲಸವಾಗಿಬಿಟ್ಟಿದೆ.
ಇದಕ್ಕೆ ಮುಖ್ಯ ಕಾರಣ ದಿಲ್ಲಿ-ಹರಿಯಾಣ ಗಡಿ ಮಾರ್ಗದಲ್ಲಿ ನಿತ್ಯವೂ ಸಂಚರಿಸುತ್ತಿದ್ದ ಕೆಲವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು ಮತ್ತು ಇದರ ಪರಿಣಾಮವಾಗಿ ಹರಿಯಾಣದ 18 ಮಂದಿಗೆ ಸೋಂಕು ಹರಡಿರುವುದು. ತೀರಾ ಅಗತ್ಯ ಸೇವೆ ಒದಗಿಸುವವರಿಗೆ ಪಾಸ್ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದ್ದರೂ, ಪಾಸ್ ತೋರಿಸಿದರೂ ಅನೇಕ ಮಂದಿಗೆ ಪೊಲೀಸರು ಸಂಚಾರಕ್ಕೆ ಅವಕಾಶ ಮಾಡಿಕೊಡದಿರುವುದು ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮೇ 3ರಂದು ಲಾಕ್ಡೌನ್ ಸಡಿಲಿಸಿದ ಬಳಿಕ ಪರಿಸ್ಥಿತಿ ತಿಳಿಯಾಗುತ್ತದೆ ಎಂದು ಹರಿಯಾಣ ಸರ್ಕಾರ ಹೇಳುತ್ತಿತ್ತಾದರೂ, ಈಗ ಲಾಕ್ಡೌನ್ ಮತ್ತೆ ವಿಸ್ತರಣೆ ಆಗಿರುವುದರಿಂದ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಏತನ್ಮಧ್ಯೆ, ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳು ಸರ್ಕಾರದ ಕೆಲಸಕ್ಕೆ ಬೆಂಬಲ ಸೂಚಿಸಿ ಸಹಕರಿಸಿರುವುದಕ್ಕೆ 2 ದಿನಗಳ ಹಿಂದೆ ಹರಿಯಾಣ ಸಿಎಂ ಮನೋಹರ ಲಾಲ್ ಖಟ್ಟರ್ ವಿಡಿಯೋ ಸಂವಾದದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕರೊನಾ ವೈರಸ್ ಪರೀಕ್ಷೆ ಬಳಿಕ ಆತಂಕದಿಂದಲೇ ಆತ್ಮಹತ್ಯೆ ಮಾಡಿಕೊಂಡ ಎರಡನೇ ಪ್ರಕರಣ ಹರಿಯಾಣದಲ್ಲಿ ವರದಿಯಾಗಿದೆ. 30 ವರ್ಷದ ಯುವಕನಿಗೆ ಶಂಕೆಯ ಮೇಲೆ ಕರೊನಾ ಟೆಸ್ಟ್ ನಡೆಸಲಾಗಿತ್ತು ಮತ್ತು ಫಲಿತಾಂಶಕ್ಕಾಗಿ ಆರೋಗ್ಯ ಸಿಬ್ಬಂದಿಯೂ ಕಾಯುತ್ತಿದ್ದರು. ಕರೊನಾ ಬಗ್ಗೆ ಆತಂಕಿತನಾಗಿದ್ದ ಯುವಕ ಹರಿಯಾಣ ಪಂಚಕುಲಾದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ, ಸಿಬ್ಬಂದಿಯ ಕಣ್ತಪ್ಪಿಸಿ ಮೂರನೇ ಮಹಡಿಯಿಂದ ನೆಗೆದು ಪ್ರಾಣ ಬಿಟ್ಟಿದ್ದಾನೆ. ಕ್ಷಯ ರೋಗದಿಂದಾಗಿ ಕೆಲ ದಿನಗಳ ಹಿಂದೆಯೇ ಆತನನ್ನು ಆಸ್ಪತ್ರೆಯಲ್ಲಿ ಸೇರಿಸಿಕೊಳ್ಳಲಾಗಿತ್ತು. ಈ ನಡುವೆ ಕರೊನಾ ಆತಂಕ ತಪ್ಪಿಸಲೆಂದು ಪರೀಕ್ಷೆ ನಡೆಸಲಾಗಿತ್ತು. ಏಪ್ರಿಲ್ ಆರಂಭದ ವಾರದಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ಕರೊನಾ ಪರೀಕ್ಷೆಯ ಫಲಿತಾಂಶ ಬರುವ ಮುನ್ನವೇ ಕರೊನಾತಂಕಕ್ಕೆ ಬಲಿಯಾಗಿದ್ದರು. ಕರ್ನಾಲ್ನ ಕಲ್ಪನಾ ಚಾವ್ಲಾ ಮೆಡಿಕಲ್ ಕಾಲೇಜ್ನಲ್ಲಿ ದಾಖಲಾಗಿದ್ದ ಅವರು ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು 6ನೇ ಮಹಡಿಯಿಂದ ಜಿಗಿದು, ಮೃತಪಟ್ಟಿದ್ದರು. ಗಂಟಲು ದ್ರವ ಪರೀಕ್ಷೆಯಲ್ಲಿ ಅವರಲ್ಲಿ ಕರೊನಾ ಸೋಂಕು ಪತ್ತೆಯಾಗಿರಲಿಲ್ಲ.