ಕುವೆಂಪು ವಿವಿ 33ನೇ ಘಟಿಕೋತ್ಸವ ಜು.27ಕ್ಕೆ

kuvempu vv
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯ
Published on

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಸಮಾರಂಭವು ವಿವಿ ಆವರಣದಲ್ಲಿರುವ ಬಸವ ಸಭಾ ಭವನದಲ್ಲಿ ಜು.22ರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಈ ಭಾರಿಯ ಘಟಿಕೋತ್ಸವದಲ್ಲಿ 14,750 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ವಿವಿಯ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್, ವಿವಿ ಸಮಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತಿಯಲ್ಲಿ ಇಸ್ರೋ ಕುಲಾಧಿಪತಿ, ಪದ್ಮಭೂಷಣ ಪುರಸ್ಕೃತ ಡಾ.ಬಿ.ಎನ್.ಸುರೇಶ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ 5,499 ಪುರುಷರು ಹಾಗೂ 9,251 ಮಹಿಳೆಯರು ಸೇರಿದಂತೆ ಒಟ್ಟು 14,750 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 98 ಪುರುಷರು, 61 ಮಹಿಳೆಯರು ಸೇರಿದಂತೆ 159 ಅಭ್ಯರ್ಥಿಗಳು ಪಿಎಚ್‌ಡಿ ಪದವಿ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.
ಕುಲಸಚಿವೆ ಪ್ರೊ.ಸಿ.ಗೀತಾ, ಪರೀಕ್ಷಾಂಗ ಕುಲಸಚಿವ ಡಾ.ಎಸ್.ಕೆ.ನವೀನ್‌ಕುಮಾರ್, ಉಪಕುಲಸಚಿವ ಪ್ರೊ.ಮಂಜುನಾಥ್, ವಿವಿ ಹಣಕಾಸು ಅಧಿಕಾರಿ ಪ್ರೊ.ನರಸಿಂಹಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ.ಎಂ.ಆರ್.ಸತ್ಯಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.
ವಿದ್ಯಾರ್ಥಿನಿಯರ ಚಿನ್ನದ ಭೇಟೆ: ಘಟಿಕೋತ್ಸವದ 141 ಚಿನ್ನದ ಪದಕಗಳನ್ನು 58 ಮಹಿಳೆಯರು ಹಾಗೂ 16 ಪುರುಷರು ಸೇರಿದಂತೆ 74ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಶಂಕರಘಟ್ಟ ಜ್ಞಾನ ಸಹ್ಯಾದ್ರಿಯ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ವಿ.ವಿಸ್ಮಿತಾ ಅತಿ ಹೆಚ್ಚು 12 ಸ್ವರ್ಣ ಪದಕ ಹಾಗೂ ಎರಡು ನಗದು ಬಹುಮಾನ ಪಡೆದಿದ್ದಾರೆ.
ಮೂವರಿಗೆ ಗೌರವ ಡಾಕ್ಟರೇಟ್: ಕುವೆಂಪು ವಿವಿಯ 33ನೇ ಘಟಿಕೋತ್ಸವ ಸಂದರ್ಭದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಸಾಹಿತ್ಯ-ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದವರನ್ನು ಗುರುತಿಸಲಾಗಿದೆ. ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದ ಸಾಧಕ ಉಡುಪಿ ಮೂಲದ ಸದಾನಂದ ಶೆಟ್ಟಿ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಸಾಧಕ ವಿಜಯಪುರ ಜಿಲ್ಲೆಯ ಕಲ್ಲಿಕೇರಿ ಗ್ರಾಮದ ಪಂಡಿತ್ ರಾಜಗುರು ಗುರುಸ್ವಾಮಿ ಕಲ್ಲಿಕೇರಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿರುವ ದಾವಣಗೆರೆ ಜಿಲ್ಲೆಯ ಎಂ.ಚಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net