ಮನೆ, ಫ್ಲ್ಯಾಟ್ ನೆಪದಲ್ಲಿ 3,300 ಕೋಟಿ ರೂ. ಧೋಖಾ

Mumbai man
Published on

ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿಯೊಂದು ಸೈಟ್, ಮನೆ ಮತ್ತು ಫ್ಲ್ಯಾಟ್ ಮಾರಾಟದ ಸೋಗಿನಲ್ಲಿ 3,300 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದ್ದು, ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓರೆನ್ ಅರ್ಬನ್ ಖರೀದಿದಾರರ ಕಲ್ಯಾಣ ಸಂಘದ ಅಧ್ಯಕ್ಷ ಫಾರೂಲ್ ಜಾನ್ ನರೋನಾ, ಈ ಕುರಿತು ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಓರೆನ್ ಅರ್ಬನ್ ಡೆವಲಪರ್ಸ್ ಪ್ರೈ.ಲಿ. ಕಂಪನಿ, ವಾಸುದೇವನ್ ಸತ್ಯಮೂರ್ತಿ, ಪ್ರಿಯಾ ವಾಸುದೇವನ್, ಸತ್ಯಮೂರ್ತಿ ಸಾಯಿಪ್ರಸಾದ್ ಮತ್ತು ನಿರ್ದೇಶಕರು, ಬ್ಯಾಂಕ್ ಅಧಿಕಾರಿಗಳು ಸೇರಿ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓರೆನ್ ಗ್ರೂಪ್ ಕಂಪನಿ ನಿರ್ದೇಶಕರು, ಓರೆನ್ ಅರ್ಬನ್ ಪ್ರಾಜೆಕ್ಟ್ ಹೆಸರಿನಲ್ಲಿ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕು ಕಸಬ ಹೋಬಳಿಯ ಕನ್ನಮಂಗಲ ಮತ್ತು ಪೂಜನಹಳ್ಳಿಯಲ್ಲಿ ಮನೆ, ಸೈಟ್, ಫ್ಲ್ಯಾಟ್ ನಿರ್ಮಾಣ ಮಾಡುವುದಾಗಿ ಜಾಹೀರಾತು ನೀಡಿದರು. 2012ರಲ್ಲಿ ಟೌನ್‌ಶೀಪ್‌ಗೆ ಚಾಲನೆ ಕೊಟ್ಟು 2017ರಲ್ಲಿ ಮುಕ್ತಾಯ ಮಾಡಿ ಮನೆ ಮತ್ತು ಫ್ಲ್ಯಾಟ್ ಹಸ್ತಾಂತರ ಮಾಡುವುದಾಗಿ ಭರವಸೆ ನೀಡಿದ್ದರು.

ಸಂಘದ ಸದಸ್ಯರು 2013ರಲ್ಲಿ ಹಲವರು ಮನೆ ಮತ್ತು ಫ್ಲ್ಯಾಟ್ ಗಳನ್ನು ಬುಕ್ ಮಾಡಿ ಮುಂಗಡವನ್ನು ನೀಡಿದರು. ಇದೇ ವೇಳೆ ಬ್ಯಾಂಕ್‌ಗಳ ಜತೆಗೆ ಒಡಂಬಡಿಕೆ ಮಾಡಿಕೊಂಡಿರುವುದಾಗಿ ಹೇಳಿ ವಿವಿಧ ಬ್ಯಾಂಕ್ ಮತ್ತು ಹೌಸಿಂಗ್ ೈನಾನ್ಸ್ ಕಂಪನಿಗಳ ಬಳಿ ಗೃಹ ಸಾಲ ಕೊಡಿಸುವುದಾಗಿ ಪುಸಲಾಯಿಸಿದರು. ಅಲ್ಲದೇ, ವಿವಿಧ ಸ್ಕೀಮ್‌ಗಳಲ್ಲಿ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು.

ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ ಯೋಜನೆ ಮುಕ್ತಾಯ ಆಗುವವರೆಗೂ ಸಾಲದ ಕಂತು ಪಾವತಿ ಮಾಡುವಂತಿಲ್ಲ ಎಂದು ನಂಬಿಸಿದರು. ವಿವಿಧ ಬ್ಯಾಂಕ್‌ಗಳಲ್ಲಿ ಗ್ರಾಹಕರ ಹೆಸರಿನಲ್ಲಿ 1,500 ಕೋಟಿ ರೂ. ಮಾರ್ಟ್‌ಗೇಜ್ ಸಾಲ ಮಂಜೂರು ಮಾಡಿಸಿ ನೇರ ಕಂಪನಿ ಖಾತೆಗೆ ವರ್ಗಾವಣೆ ಮಾಡಿಕೊಂಡರು. ಗ್ರಾಹಕರಿಂದ ನೇರವಾಗಿ 1,800 ಕೋಟಿ ರೂ. ಪಡೆದುಕೊಂಡಿದ್ದಾರೆ. ಈ ಹಣವನ್ನು ವಿವಿಧ ಕಂಪನಿಗಳಿಗೆ ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮನೆ ಮತ್ತು ಫ್ಲ್ಯಾಟ್ ಖರೀದಿದಾರರಿಗೆ ವಿವಿಧ ದಿನಾಂಕದಲ್ಲಿ ಅಗ್ರೀಮೆಂಟ್ ಮಾಡಿಕೊಟ್ಟಿದ್ದು, 12 ವರ್ಷ ಕಳೆದರೂ ನೋಂದಣಿ ಮಾಡಿಕೊಟ್ಟಿಲ್ಲ.

ಪ್ರಸ್ತುತ ಶೇ.49 ಮಾತ್ರ ಯೋಜನೆ ಪೂರ್ಣವಾಗಿದೆ. ಕೆ-ರೆರಾ ಗ್ರಾಹಕರಿಗೆ ಹಣ ವಾಪಸ್ ಪಾವತಿ ಮಾಡುವಂತೆ ಆದೇಶ ಮಾಡಿದರೂ ಯಾವುದೇ ಉತ್ತರ ನೀಡಿಲ್ಲ. ಹಣವೂ ಕೊಟ್ಟಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net