

ಬೆಂಗಳೂರು: ಸಾಲ ವಾಪಸ್ ನೀಡುವ ನೆಪದಲ್ಲಿ ಯುವತಿಗೆ ಕರೆ ಮಾಡಿ ಬ್ಯಾಂಕ್ ಖಾತೆಗೆ 62 ಸಾವಿರ ರೂ. ಅನ್ನು ಸೈಬರ್ ಕಳ್ಳ ಕನ್ನ ಹಾಕಿದ್ದಾನೆ.
ನೀಲಸಂದ್ರದ ಆರ್ಮಿ ಕ್ಯಾಂಪಸ್ ನಿವಾಸಿ 22 ವರ್ಷದ ಯುವತಿ, ಈ ಕುರಿತು ಅಶೋಕನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸೆಪ್ಟೆಂಬರ್ 7ರಂದು ಯುವತಿ ಮೊಬೈಲ್‌ಗೆ ಕರೆ ಮಾಡಿದ ಸೈಬರ್ ಕಳ್ಳ, ನಿಮ್ಮ ತಂದೆಗೆ 3 ಸಾವಿರ ರೂ. ಸಾಲ ಕೊಡಬೇಕಿದೆ. ಅವರು ನನಗೆ ಸಿಗುತ್ತಿಲ್ಲ. ಆದರಿಂದ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡುತ್ತೆನೆ ಎಂದು ಹೇಳಿದ್ದಾನೆ. ಅದಕ್ಕೆ ಯುವತಿ, ಒಪ್ಪಿಕೊಂಡಿದ್ದಾಳೆ. ಸ್ವಲ್ಪ ಸಮಯದ ಬಳಿಕ ಯುವತಿ ಮೊಬೈಲ್‌ಗೆ 30 ಸಾವಿರ ರೂ. ಕ್ರೆಡಿಟ್ ಆಗಿರುವ ಸಂದೇಶ ಬಂದಿದೆ. ಯುವತಿ, ಬ್ಯಾಂಕ್ ಖಾತೆಗೆ ಜಮೆ ಆಗಿರುವ ಬಗ್ಗೆ ಖಚಿತ ಪಡಿಸಿಕೊಂಡಿಲ್ಲ. ಅಷ್ಟರಲ್ಲಿಯೇ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, 3 ಸಾವಿರ ರೂ. ಜಮೆ ಮಾಡುವ ಬದಲು 30 ಸಾವಿರ ರೂ. ವರ್ಗಾವಣೆ ಮಾಡಿದ್ದೆನೆ.
ಹೆಚ್ಚುವರಿಯಾಗಿ ಬಂದಿರುವ ಹಣವನ್ನು ವಾಪಸ್ ಕಳುಹಿಸುವಂತೆ ವಾಟ್ಸ್‌ಆ್ಯಪ್‌ನಲ್ಲಿ ಕ್ಯೂರ್ ಕೋಡ್ ಕಳುಹಿಸಿದ್ದ. ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿ ಯುವತಿ, 2 ಸಾವಿರ ರೂ. ಅನ್ನು ಕಳುಹಿಸಿದ್ದಳು. ಇದೇ ರೀತಿ 2 ಸಾವಿರ ರೂ. 6 ಬಾರಿ ಮತ್ತು ಒಮ್ಮೆ 15 ಸಾವಿರ ರೂ. ಅನ್ನು ವರ್ಗಾವಣೆ ಮಾಡಿದ್ದಾರೆ. ಅದಕ್ಕೆ ಸೈಬರ್ ವಂಚಕ, ನನಗೆ ಹಣ ಬಂದಿಲ್ಲ. ಅದು ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗಲಿದೆ ಎಂದು ನಂಬಿಸಿದ್ದಾನೆ.
ಕೆಲ ನಿಮಿಷದಲ್ಲೇ ಯುವತಿ ಮೊಬೈಲ್‌ಗೆ 15 ಸಾವಿರ ರೂ. ಕ್ರೆಡಿಟ್ ಆಗಿರುವ ಸಂದೇಶ ಬಂದಿದೆ. ಆಗ ಯುವತಿ, ನನ್ನ ಹಣ ವಾಪಸ್ ಬಂದಿರಬೇಕೆಂದು ವಂಚಕನ ವ್ಯಾಲೆಟ್‌ಗೆ ಮತ್ತೆ ಹಣ ವಗಾವಣೆ ಮಾಡಿದ್ದಾರೆ. ಹೀಗೆ ಒಟ್ಟಾರೆ 62 ಸಾವಿರ ರೂ. ಅನ್ನು ವರ್ಗಾವಣೆ ಮಾಡಿ ಕೊನೆಗೆ ಬ್ಯಾಂಕ್ ಖಾತೆಗೆ ಪರಿಶೀಲನೆ ಮಾಡಿಕೊಂಡಿದ್ದಾರೆ. 62 ಸಾವಿರ ರೂ. ಕಡಿತವಾಗಿರುವುದು ಗೊತ್ತಾಗಿ ಆರೋಪಿ ಮೊಬೈಲ್‌ಗೆ ಕರೆ ಮಾಡಿದ್ದು, ಸಂಪರ್ಕಕ್ಕೆ ಲಭಿಸಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.