

ವಿಜಯವಾಡ: ಟಿವಿಎಸ್ ಬೈಕ್ ಶೋರೂಂನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಬೆಳಗಿನ ಜಾವ 5 ಘಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಒಬ್ಬರು ಚೆನ್ನೈ-ಕಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟಿವಿಎಸ್ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಶೋರೂಂನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಶೋರೂಂನಲ್ಲಿ ಎಲೆಕ್ಟ್ರಿಕ್ ವಾಹನಗಳು ಇದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲೇ ಹರಡಿದೆ. ಶೋರೂಂ, ಗೋಡೌನ್ ಹಾಗೂ ಸರ್ವೀಸ್ ಸೆಂಟರ್ ಒಂದೇ ಕಡೆ ಇದ್ದ ಕಾರಣ ಕಟ್ಟಡದಲ್ಲಿ ಹೆಚ್ಚಿನ ವಾಹನಗಳಿದ್ದವು. ಘಟನೆಯಲ್ಲಿ 300ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಸ್ಥಳದಲ್ಲಿ ಐದು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.