

ಬೆಂಗಳೂರು: ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ೩೦೦ ಕ್ಕೂ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ಲೋಕೇಶ್ ಗೌಡ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದು ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.೩ ರ ತಡರಾತ್ರಿ ಈ ಘಟನೆ ನಡೆದಿತ್ತು:
ಇಬ್ಬರು ಯುವತಿಯರು ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನಲ್ಲಿ ಏ.೩ ರ ತಡರಾತ್ರಿ ೧.೫೫ಕ್ಕೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಏಕಾಏಕಿ ಓರ್ವ ಯುವತಿಯನ್ನು ಹಿಡಿದುಕೊಂಡು ಗೋಡೆಗೆ ಒರಗಿಸಿ ಖಾಸಗಿ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಆ ಯುವತಿಯರು ಜೋರಾಗಿ ಕಿರುಚಿದ ಪರಿಣಾಮ ಕಾಮುಕ ಯುವತಿಯನ್ನು ಬಿಟ್ಟು ಸ್ಥಳದಿಂದ ಪರಾರಿಯಾದ್ದ. ಈ ಘಟನೆಯ ದೃಶ್ಯ ಕಟ್ಟಡವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಿರುಕುಳ ಅನುಭವಿಸಿದ ಯುವತಿಯರು ಘಟನೆ ಸಂಬಂಧ ಯಾವುದೇ ದೂರು ನೀಡಿರಲ್ಲಿಲ್ಲ. ಆದರೆ, ಸ್ಥಳೀಯ ನಿವಾಸಿಯೊಬ್ಬರು ದೂರು ನೀಡಿದ್ದರು.
ಮತ್ತೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಂಡು ವರದಿ ನೀಡಬೇಕು ಎಂದು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ರಾಜ್ಯ ಮಹಿಳಾ ಆಯೋಗ ಸೂಚಿಸಿದೆ.