

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಆಡಳಿತ ಸುಧಾರಣೆ ತರುವ ನಿಟ್ಟಿನಲ್ಲಿ ಪಿಡಿಒ ವರ್ಗಾವಣೆಗೆ ಸರ್ಕಾರ ಕೌನ್ಸೆಲಿಂಗ್ ವ್ಯವಸ್ಥೆ ಜಾರಿ(Government implements counseling system for PDO transfer) ಗೆ ತರಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ(Priyankh Kharge) ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಡಾ.ರಂಗನಾಥ್ ಅವರ ಪ್ರಶ್ನೆಗೆ ಉತ್ತರಿಸಿದರು.
300 ರಿಂದ 400 ಪಿಡಿಒಗಳು 10 ವರ್ಷ, 400ಕ್ಕೂ ಹೆಚ್ಚು ಪಿಡಿಒಗಳು 8 ವರ್ಷ, ಶೇ.70ಕ್ಕೂ ಹೆಚ್ಚು ಮಂದಿ 5 ವರ್ಷಗಳಿಂದ ಒಂದೇ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಬ್ಬರು ಪಿಡಿಒ ಒಂದು ಕಿ.ಮೀ. ಅಂತರದಲ್ಲೇ ಐದು ವರ್ಷಕ್ಕೊಮ್ಮೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ವರ್ಗಾವಣೆಯಾದ ಉದಾಹರಣೆಗಳೂ ಇವೆ ಎಂದು ಗಮನಕ್ಕೆ ತಂದರು.
ಐದು ವರ್ಷ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಸಿದ್ಧತೆ ನಡೆದಿದೆ ಎಂದು ಹೇಳಿದರು.
ಅದಕ್ಕೆ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಐದು ವರ್ಷ ಬೇಡ, ಮೂರು ವರ್ಷಕ್ಕೆ ವರ್ಗಾವಣೆ ಮಾಡಿ ಎಂದು ಆಗ್ರಹಿಸಿದರು.
ಇದು ಸುಧಾರಣೆಯ ಮೊದಲ ಹೆಜ್ಜೆ ಇದು ಕಾರ್ಯರೂಪಕ್ಕೆ ಬಂದ ಮೇಲೆ ಸಾಧಕ ಬಾಧಕ ನೋಡಿ ಮಾಡೋಣ ಎಂದು ಖರ್ಗೆ ಭರವಸೆ ನೀಡಿದರು.
ರಾಜ್ಯದಲ್ಲಿ 868 ಪಿಡಿಒ ಹುದ್ದೆ ಖಾಲಿ ಇವೆ. ಈ ಪೈಕಿ 446 ನೇರ ನೇಮಕ ಮತ್ತು 222 ಬಡ್ತಿ ನೀಡುವ ಹುದ್ದೆಗಳಿವೆ. ಈಗಾಗಲೇ 247 ಹುದ್ದೆ ಭರ್ತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಖಾಲಿ ಇರುವ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದೆ ನೀಡಿದೆ ಎಂದು ಹೇಳಿದರು.