ಖಾಸಗಿ ಬಸ್​ ಕಾಲುವೆಗೆ ಉರುಳಿ 30 ಮಂದಿಗೆ ಗಾಯ

klr bus
ಕೋಲಾರ ತಾಲೂಕಿನ ಸುಗಟೂರು ಸಮೀಪ ರಸ್ತೆಯ ಬಂದಿ ಕಾಲುವೆಗೆ ಉರುಳಿರುವ ಬಸ್ಸನ್ನು ಕ್ರೇನ್​ ಮೂಲಕ ತೆರವುಗೊಳಿಸುತ್ತಿರುವುದು.
Published on

ಕೋಲಾರ: ಕೋಲಾರ-ಚಿಂತಾಮಣಿ ರಸ್ತೆಯ ಸುಗಟೂರು ಬಳಿ ಮದುವೆ ಆರತಕ್ಷತೆಗೆ ಬಂದಿದ್ದವರನ್ನು ವಾಪಸ್​ ಹಳ್ಳಿಗೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್​ ಮಂಗಳವಾರ ರಾತ್ರಿ ರಸ್ತೆ ಬದಿ ಕಾಲುವೆಗೆ ಉರುಳಿ ಬಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿಯಿಂದ 3 ಖಾಸಗಿ ಬಸ್​ಗಳಲ್ಲಿ ಕೋಲಾರ ನಗರ ಹೊರವಲಯದ ಕನ್ವೆನ್ಸನ್​ ಹಾಲ್​ನಲ್ಲಿ ಮದುವೆ ಆರತಕ್ಷತೆಗೆ ಆಗಮಿಸಿದ್ದರು. 3 ಖಾಸಗಿ ಬಸ್​ಗಳ ಪೈಕಿ ಒಂದು ಬಸ್​ ಉರುಳಿ ಬಿದ್ದಿದ್ದು, ಬಸ್​ನಲ್ಲಿದ್ದ ಸುಮಾರು 15 ಮಂದಿ ಮಹಿಳೆಯರು ಸೇರಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಪೈಕಿ ಐದಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಕೋಲಾರದ ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ಕೋಲಾರದ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್​ ಹಳ್ಳಕ್ಕೆ ಬಿದ್ದು ಕೆಸಿ ವ್ಯಾಲಿ ನೀರಿನಲ್ಲಿ ಮುಳುಗಿದ ಕಾರಣ ಅದರಲ್ಲಿದ್ದ ಎಲ್ಲರೂ ನೀರಿನಲ್ಲಿ ಬಿದ್ದಿದ್ದರು. ಈ ವಾಹನದ ಜತೆಗಿದ್ದ ಇನ್ನೆರಡು ಬಸ್​ಗಳ ಜನರು ಕೂಡಲೇ ಎಲ್ಲರನ್ನೂ ರಕ್ಷಿಸಿದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮ ಕೈಗೊಂಡರು. ಬುಧವಾರ ಬೆಳಗ್ಗೆ ಕ್ರೇನ್​ ಕರೆಯಿಸಿ ಬಸ್​ ಮೇಲಕ್ಕೆ ಎತ್ತಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net