ಕರ್ನಾಟಕದಲ್ಲಿ 3 ವರ್ಷದ ಪದವಿ: ಮೇ 2ನೇ ವಾರದಲ್ಲಿ ತೀರ್ಮಾನ

Thorat (2)
Published on

ಬೆಂಗಳೂರು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದ್ದ 4 ವರ್ಷದ ಪದವಿಯನ್ನು 3 ವರ್ಷಕ್ಕೆ ಇಳಿಸುವ ಸಂಬಂಧ ಮೇ ಎರಡನೇ ವಾರದಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ.

2024-25ನೇ ಶೈಕ್ಷಣಿಕ ಸಾಲಿನ ಪದವಿ ತರಗತಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ 3 ಅಥವಾ 4 ವರ್ಷದ ಪದವಿಯಲ್ಲಿ ಯಾವುದೆಂದು ಸ್ಪಷ್ಟಪಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ.

ಪದವಿಯನ್ನು 4 ವರ್ಷದಿಂದ 3 ವರ್ಷಕ್ಕೆ ಇಳಿಸುವ ಸಂಬಂಧ ಪ್ರೊ. ಸುಖದೇವ್ ಥೋರಟ್ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಈಗಾಗಲೇ ವರದಿಯನ್ನು ನೀಡಿದೆ.ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರ್ಕಾರವು ನಿರ್ಣಯ ಕೈಗೊಳ್ಳುವಂತಿಲ್ಲ. ಮೇ 7ಕ್ಕೆ ರಾಜ್ಯದಲ್ಲಿ 2ನೇ ಹಂತದ ಚುನಾವಣೆ ಮುಗಿದ ನಂತರ ಸರ್ಕಾರವು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಸದ್ಯದ ಮಟ್ಟಿಗೆ ವಿಶ್ವವಿದ್ಯಾಲಯಗಳು ಹಾಲಿ ಇರುವ ನಿಯಮಗಳ ಪ್ರಕಾರವೇ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ವರದಿಯನ್ನು ಅನುಷ್ಠಾನಗೊಳಿಸಿದ ನಂತರ ಹೊಸ ಆದೇಶವನ್ನು ಪಾಲನೆ ಮಾಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳು ಜುಲೈ ಅಥವಾ ಆಗಸ್ಟ್‌ನಲ್ಲಿ ಆರಂಭವಾಗುವುದರಿಂದ ಇನ್ನೂ ಸಾಕಷ್ಟು ಸಮಯವಿದೆ. ಅಷ್ಟರೊಳಗೆ ರಾಜ್ಯ ಸರ್ಕಾರವು ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net