

ಬೆಂಗಳೂರು ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೊಳಿಸಿ 3 ವರ್ಷದ ಪದವಿಯನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯವೆಂದು ಎಐಡಿಎಸ್‌ಒ ಸಂಘಟನೆ ಗುರುವಾರ ವಿಜಯೋತ್ಸವ ಆಚರಿಸಿತು.
ಫ್ರೀಡಂ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳೆಲ್ಲರೂ ಸೇರಿ ಈ ವಿಜಯೋತ್ಸವ ಆಚರಿಸಿದರು. ಈ ವೇಳೆ ಮಾತನಾಡಿದ ಎಐಡಿಎಸ್‌ಒ ಅಖಿಲ ಭಾರತ ಅಧ್ಯಕ್ಷರಾದ ವಿ.ಎನ್.ರಾಜಶೇಖರ್, ಎಐಡಿಎಸ್‌ಒ ನೇತೃತ್ವದಲ್ಲಿ ಎರಡು ವರ್ಷಗಳ ಕಾಲ ನಡೆದ ವಿದ್ಯಾರ್ಥಿ ಹೋರಾಟದ ಪ್ರತಿಲವಾಗಿ ರಾಜ್ಯದಲ್ಲಿ ಎಸ್‌ಇಪಿ ಜಾರಿಗೆ ತರಲಾಗುತ್ತಿದೆ.
ಈ ಹಿಂದಿನ ಬಿಜೆಪಿ ಸರ್ಕಾರವು 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಾಗ ಅದನ್ನು ವಿರೋಧಿಸಿ ರಾಜ್ಯವ್ಯಾಪ್ತಿ 36 ಲಕ್ಷ ಸಹ ಸಂಗ್ರಹಿಸಲಾಯಿತು. ಪಠ್ಯದಲ್ಲಿ ಕೋಮು, ಜಾತಿ ಮುಂತಾದ ವಿಭಜಕ ಚಿಂತನೆಗಳನ್ನು ಸೇರಿಸಿ ವಿದ್ಯಾರ್ಥಿಗಳ ಒಗ್ಗಟ್ಟನ್ನು ಒಡೆಯುವುದು ಸೇರಿ ಅನೇಕ ಕರಾಳ ಅಂಶಗಳನ್ನು ಎನ್‌ಇಪಿ ಹೊಂದಿದೆ. ಈ ನೀತಿಯ ವಿರುದ್ಧ ದೇಶವ್ಯಾಪ್ತಿ ಹೋರಾಟಗಳನ್ನು ಕಟ್ಟುತ್ತಿರುವ ಏಕೈಕ ಸಂಘಟನೆ ಇದಾಗಿದೆ ಎಂದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯಾಧ್ಯಕ್ಷೆ ಕೆ.ಎಸ್.ಅಶ್ವಿನಿ ಸೇರಿ ಹಲವಾರು ಸದಸ್ಯರು, ವಿದ್ಯಾರ್ಥಿಗಳು ಈ ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.