ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ರೆ 3ರಿಂದ 5 ವರ್ಷ ಕಾರಾಗೃಹ ಶಿಕ್ಷೆ

MHT-CET_Exam
Published on

ಬೆಂಗಳೂರು: ಎಸ್​ಎಸ್​ಎಲ್​ಸಿ ಮತ್ತು ಪದವಿ ಪೂರ್ವ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ಕಾರ ಮುಂದಾಗಿದೆ.

ಯಾವುದೇ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಮಂಡಳಿಯು ಎಲ್ಲ ರೀತಿಯ ಅಗತ್ಯ ಪೂರ್ವಸಿದ್ಧತೆಗಳೊಂದಿಗೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುತ್ತಿದೆ. ಈ ನಡುವೆ ಕೆಲ ಕಿಡಿಗೇಡಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಯನ್ನು ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆಪತ್ರಿಕೆ ಸೋರಿಕೆಗೆ ಪ್ರಯತ್ನಪಡುತ್ತಾರೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಗೊಂದಲವುಂಟಾಗುತ್ತದೆ. ಇಂಥ ಚಟುವಟಿಕೆಗಳಲ್ಲಿ ತೊಡಗುವವರನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲು ಸರ್ಕಾರ ಮುಂದಾಗಿದೆ.

ಕಾನೂನು ಬಾಹಿರವಾಗಿ ಆಕ್ರಮದಲ್ಲಿ ಪಾಲ್ಗೊಂಡ ಅಧಿಕಾರಿ, ಸಿಬ್ಬಂದಿ ವರ್ಗದವರು, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿನ ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ.

ಇಲಾಖಾ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಸೂಕ್ತ ಆದೇಶ ಹೊರಡಿಸಲು ಹಾಗೂ ಪರೀಕ್ಷಾ ಆಕ್ರಮದಲ್ಲಿ ಪಾಲ್ಗೊಳ್ಳವವರು ಬಾಹ್ಯ ವ್ಯಕ್ತಿಗಳಾಗಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶ ಹೊರಡಿಸಬೇಕೆಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿತ್ತು. ಇದೀಗ ಸರ್ಕಾರವು ಕರ್ನಾಟಕ ಎಜುಕೇಷನ್ ಕಾಯ್ದೆ-2017ರ ಅನ್ವಯ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದೆ. ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪಶ್ನೆಪತ್ರಿಕೆಯ ಫೋಟೋ ತೆಗೆಯುವುದು, ಪ್ರಶ್ನೆಪತ್ರಿಕೆಯನ್ನು ಜಾಲತಾಣದಲ್ಲಿ ಹರಿಬಿಡುವವರಿಗೆ 3ರಿಂದ 5 ವರ್ಷ ಜೈಲು ಶಿಕ್ಷೆ ಹಾಗೂ ಐದು ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net