

ಉತ್ತರಪ್ರದೇಶ: ( Google Map ) ಗೂಗಲ್ ಮ್ಯಾಪ್ ಅನ್ನು ನಂಬಿ ಕಾರು ಚಾಲನೆ ಮಾಡಿಕೊಂಡು ಬಂದು ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ನದಿಗೆ ಕಾರು ಬಿದ್ದಿದೆ. ಅಷ್ಟೊಂದು ಎತ್ತರದಿಂದ ಕಾರು ಏಕಾಏಕಿ ರಾಮಗಂಗಾ ನದಿಗೆ ಬಿದ್ದಿದ್ದು, ಕಾರು ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬರೇಲಿಯಲ್ಲಿ ಭಾನುವಾರ ಭೀಕರ ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದವರು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ಪ್ರಯಾಣಿಸುತ್ತಿದ್ದಾಗ ಖಲ್ಪುರ್-ದತಗಂಜ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಮಾಹಿತಿ ಪಡೆದ ಬರೇಲಿಯ ಫರೀದ್‌ಪುರ ಪೊಲೀಸ್ ಠಾಣೆ ಪೊಲೀಸರು ಮತ್ತು ಬದೌನ್‌ನ ದತಗಂಜ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಜೆಸಿಬಿ ಸಹಾಯದಿಂದ ಕಾರನ್ನು ನದಿಯಿಂದ ಹೊರತೆಗೆಯಲಾಯಿತು. ಪೊಲೀಸರು ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಕಾರಿನಲ್ಲಿ ಪ್ರಯಾಣಿಸುವವರಿಗೆ ಸೇತುವೆ ಅಪೂರ್ಣವಾಗಿದೆ ಎಂದು ತಿಳಿದಿರುವುದಿಲ್ಲ. ಈ ವರ್ಷ ಅತಿವೃಷ್ಟಿಯಿಂದಾಗಿ ಪ್ರವಾಹ ಉಂಟಾಗಿದ್ದು, ಸೇತುವೆಯ ಮುಂಭಾಗ ನದಿಯಲ್ಲಿ ಕೊಚ್ಚಿ ಹೋಗಿದೆ. ಆದರೆ ಈ ವಿಷಯ ತಿಳಿಯದ ಸಂತ್ರಸ್ತರು ಜಿಪಿಎಸ್ ಮ್ಯಾಪ್ ಪ್ರಕಾರ ಸೇತುವೆ ಮೇಲೆ ವೇಗವಾಗಿ ಹೋಗುತ್ತಿದ್ದಾರೆ. ಕಾರು ಸೇತುವೆಯಿಂದ ಕೆಳಗೆ ಬಿದ್ದಿದೆ. ಸದ್ಯ ಘಟನೆ ನಡೆದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಿರ್ಲಕ್ಷ್ಯ ತೋರಿರುವ ಕಟ್ಟಡ ನಿರ್ಮಾಣ ಇಲಾಖೆಯ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸ್ಥಳೀಯರು ಹೇಳುತ್ತಿದ್ದಾರೆ.