

ಬೆಂಗಳೂರು: ಸರ್ಕಾರಿ ನೌಕರಿಗೆ ಸೇರಬೇಕೆಂಬ ಬಯಕೆಯೊಂದಿಗೆ ಯುವಕ-ಯುವತಿಯರು ಪ್ರತಿಯೊಂದು ನೇಮಕಾತಿಗೂ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ತಯಾರಿ ನಡೆಸುತ್ತಾರೆ. ಆದರೆ, ಇದೀಗ ನವೆಂಬರ್ 5ರಂದೇ ಮೂರು ನೇಮಕಾತಿಗೆ ಲಿಖಿತ ಪರೀಕ್ಷೆ ನಿಗದಿ ಆಗಿದೆ. ಮೂರು ಅಥವಾ ಎರಡು ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯಲು ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾದ ಅಗ್ನಿಪರೀಕ್ಷೆ ಇದೀಗ ಎದುರಾಗಿದೆ.
ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್ಸಿ) ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರ 242 ಹುದ್ದೆಗಳಿಗೆ ಮತ್ತು ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರ 47 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಈ ನೇಮಕಾತಿಗೆ ನ. 5ರಂದು ಲಿಖಿತ ಪರೀಕ್ಷೆ ನಡೆಸುವುದಾಗಿ ಪ್ರಕಟಣೆ ಹೊರಡಿಸಿದೆ.
ಇದಕ್ಕೂ ಮೊದಲು ಐಬಿಪಿಎಸ್ ಪರೀಕ್ಷೆ ವೇಳಾಪಟ್ಟಿ ನಿಗದಿಯಾಗಿತ್ತು. ಅದರಂತೆ ನ.5ಕ್ಕೆ ಲಿಖಿತ ಪರೀಕ್ಷೆ ನಿಗದಿ ಮಾಡಿತ್ತು. ಇದು ಗಮನದಲ್ಲಿ ಇದ್ದರೂ ಕೆಪಿಎಸ್‌ಸಿ ಲೆಕ್ಕ ಸಹಾಯಕ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಯನ್ನು 5ರಂದೇ ನಿಗದಿ ಮಾಡಿದೆ. ಸಾಮಾನ್ಯವಾಗಿ ಐಬಿಪಿಎಸ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಲೆಕ್ಕ ಸಹಾಯಕ ಹುದ್ದೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ರಾಜ್ಯದ ಅಭ್ಯರ್ಥಿಗಳು, ಐಬಿಪಿಎಸ್ ಪರೀಕ್ಷೆ ಬರೆಯಬೇಕಾ? ಅಥವಾ ಲೆಕ್ಕ ಸಹಾಯಕ ಹುದ್ದೆಗೆ ಲಿಖಿತ ಪರೀಕ್ಷೆ ಬರೆಯಬೇಕಾ? ಎಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಐಬಿಪಿಎಸ್ ಪರೀಕ್ಷೆ ದೇಶದೆಲ್ಲೆಡೆ ನಡೆಯುವ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ ಕಷ್ಟಸಾಧ್ಯ. ಹಾಗಾಗಿ ಕೆಪಿಎಸ್‌ಸಿ ತನ್ನ ದಿನಾಂಕವನ್ನು ಬದಲಾಯಿಸಲು ಅವಕಾಶವಿದೆ.
ಇದಲ್ಲದೆ, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 454 ಸಿವಿಲ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೂ ನ.5ರಂದೇ ಲಿಖಿತ ಪರೀಕ್ಷೆ ನಿಗದಿಯಾಗಿದೆ. ಕಾನ್‌ಸ್ಟೆಬಲ್ ನೇಮಕಾತಿಗೆ ಅರ್ಜಿ ಸಲ್ಲಿಸಿದವರ ಪೈಕಿ ಬಹುತೇಕರು ಲೆಕ್ಕ ಸಹಾಯಕ ಹುದ್ದೆ ಮತ್ತು ಐಬಿಪಿಎಸ್ ಹುದ್ದೆಯನ್ನು ಬಯಸಿ ಅರ್ಜಿ ಸಲ್ಲಿಸಿ ತಯಾರಿ ನಡೆಸಿದವರೂ ಇದ್ದಾರೆ. ಆದರಿಂದ ಕೆಪಿಎಸ್‌ಸಿ ಮತ್ತು ಪೊಲೀಸ್ ಇಲಾಖೆ ದಿನಾಂಕ ಬದಲಾವಣೆ ಮಾಡಬೇಕೆಂದು ನೂರಾರು ಅಭ್ಯರ್ಥಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾನ್‌ಸ್ಟೆಬಲ್ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ. ಐಬಿಪಿಎಸ್ ಮತ್ತು ಕೆಪಿಎಸ್‌ಸಿ ಪದವಿ ವಿದ್ಯಾರ್ಥಿಗಳಿಗೆ ನಡೆಯುತ್ತಿದೆ. ಆದರಿಂದ ಅಭ್ಯರ್ಥಿಗಳೇ ಯಾವ ಹುದ್ದೆಗೆ ಪರೀಕ್ಷೆ ಬರೆಯಬೇಕೆಂದು ನಿರ್ಧಾರ ಮಾಡಿಕೊಳ್ಳಬಹುದು ಎಂದು ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ವರ್ಷದಲ್ಲಿ 52 ಭಾನುವಾರ ಸಿಗಲಿವೆ. ಅದರಲ್ಲಿ ಪೊಲೀಸರಿಗೆ ಕಾನೂನು ಸುವ್ಯವಸ್ಥೆ, ಗಣ್ಯರ ಭದ್ರತೆ, ಸಭೆ-ಸಮಾರಂಭ, ವಿಶೇಷ ಭದ್ರತೆ ಕರ್ತವ್ಯ ಇರಲಿದೆ. ಆದರಿಂದ ಪರೀಕ್ಷೆ ನಡೆಸಲು ಪೊಲೀಸ್ ಸಿಬ್ಬಂದಿ ಸಿಗುವುದೇ ಕಷ್ಟ. ಒಂದು ಪರೀಕ್ಷೆ ನಡೆದು ಮತ್ತೊಂದು ಪರೀಕ್ಷೆ ನಡೆಸಬೇಕಾದರೆ ಕನಿಷ್ಠ 1 ತಿಂಗಳು ಬೇಕಾಗುತ್ತದೆ. ನಮ್ಮ ಇಲಾಖೆಯಲ್ಲಿಯೂ ಒಂದಿಲ್ಲೊಂದು ನೇಮಕಾತಿ ನಡೆಯುತ್ತದೆ. ಆದರಿಂದ ಆದಷ್ಟು ಅಭ್ಯರ್ಥಿಗಳಿಗೆ ತೊಂದರೆ ಆಗದಂತೆ ದಿನಾಂಕ ನಿಗದಿ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.