ಹುಟ್ಟಿದ ಮೂರೇ ದಿನಕ್ಕೆ ಕರೊನಾ ವೈರಸ್​ಗೆ ಒಳಗಾದ ಶಿಶು; ಅದರ ಅಮ್ಮನಿಗಿಲ್ಲ ಸೋಂಕು, ವೈದ್ಯರನ್ನು ಪ್ರಶ್ನಿಸಿದ್ದಕ್ಕೆ ಸಿಕ್ಕಿದ್ದು ಅಸ್ಪಷ್ಟ ಉತ್ತರ...

Baby Birth 17 Feb 20
Published on

ಮುಂಬೈ: ಮೂರು ದಿನದ ಹಸುಗೂಸಿಗೂ ಮಾರಕ ಕರೊನಾ ವೈರಸ್ ತಗುಲಿದೆ.

ಮುಂಬೈನ ಚೆಂಬುರ್​ ನರ್ಸಿಂಗ್​ ಹೋಂನಲ್ಲಿ ಮೂರುದಿನದ ಹಿಂದಷ್ಟೇ ಗಂಡು ಮಗು ಜನಿಸಿತ್ತು. ಈ ಮಗುವಿನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಆದರೆ ಅಚ್ಚರಿಯೆಂದರೆ ಅದರ ತಾಯಿಯನ್ನು ತಪಾಸಣೆ ನಡೆಸಿದಾಗ ಅವರಲ್ಲಿ ಕರೊನಾ ಪಾಸಿಟಿವ್​ ವರದಿ ಬಂದಿಲ್ಲ.

ಮಗುವಿನ ತಂದೆ ಆಸ್ಪತ್ರೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.  ಈ ನರ್ಸಿಂಗ್​ ಹೋಂನಿಂದ ಕರೊನಾ ಸೋಂಕಿತರೊಬ್ಬರು ಇತ್ತೀಚೆಗಷ್ಟೇ ಡಿಸ್​​ಚಾರ್ಜ್​ ಆಗಿ ಹೋಗಿದ್ದರು. ಅದೇ ಕೋಣೆಯಲ್ಲಿ ನನ್ನ ಪತ್ನಿ ಹಾಗೂ ಮಗುವನ್ನು ದಾಖಲಿಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ. ಸದ್ಯ ಅವರು ಮುಂಬೈ ಕಸ್ತೂರ ಬಾ ಆಸ್ಪತ್ರೆಯಲ್ಲಿ ಕ್ವಾರಂಟೈನ್​​ನಲ್ಲಿ ಇದ್ದಾರೆ.

ಮಾ.26ರಂದು ಬೆಳಗ್ಗೆ 11.30ಕ್ಕೆ ನನ್ನ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಸುಮಾರು 12.30ರ ಸಮಯದಲ್ಲಿ ಅವರಿಬ್ಬರನ್ನೂ ಒಂದು ಕೋಣೆಯಲ್ಲಿ ಮಲಗಿಸಲಾಗಿತ್ತು. ಹಾಗೇ ಮಧ್ಯಾಹ್ನ 2ಗಂಟೆಯ ಹೊತ್ತಿಗೆ ಮತ್ತೆ ಬೇರೆ ರೂಂಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಹಾಗೆ ಕೋಣೆ ಬದಲಿಸಿದ್ದು ಯಾಕೆಂದು ಹೇಳಲಿಲ್ಲ.

ಅದಾದ 24 ಗಂಟೆಯ ಬಳಿಕ ವೈದ್ಯರು ನನಗೆ ಕರೆ ಮಾಡಿ, ನೀವು ಮೊದಲಿದ್ದ ಕೋಣೆಯಲ್ಲಿ ಕರೊನಾ ರೋಗಿಯೋರ್ವರು ಇದ್ದರು. ಹಾಗಾಗಿಯೇ ಸ್ಥಳಾಂತರ ಮಾಡಲಾಯಿತು ಎಂದು ಹೇಳಿದರು. ಆದರೂ ತಾಯಿಗೆ ಇಲ್ಲದ ಸೋಂಕು ಅದಕ್ಕೆ ಹೇಗೆ ಬಂತು ಎಂಬುದು ಅರ್ಥವಾಗುತ್ತಿಲ್ಲ ಎಂದು ಮಗುವಿನ ತಂದೆ ತಿಳಿಸಿದ್ದಾರೆ.

ನನ್ನ ಪತ್ನಿ ಹೆರಿಗೆಗೆಂದು ಈ ಆಸ್ಪತ್ರೆಗೆ ಬರುವಾಗ ಕರೊನಾ ವೈರಸ್​ನ ಯಾವ ಲಕ್ಷಣವೂ ಇರಲಿಲ್ಲ. ಆದರೂ ಮಗುವಿಗೆ ಹೇಗೆ ಬಂತು ಎಂದು ವೈದ್ಯರ ಬಳಿ ಪ್ರಶ್ನಿಸಿದ್ದಕ್ಕೆ, ಕರೊನಾ ವೈರಸ್​ ಲಂಬ ಪ್ರಸರಣವಾಗುತ್ತದೆಯೋ, ಇದೂ ಹಾಗೇ ಆಗಿದ್ದೋ ಎಂಬ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಖಂಡಿತ ಮೆಡಿಕೋ ಲೀಗಲ್​ ಕೇಸ್​ ಹೌದು. ಮಗು ವೈರಸ್​ ಸೋಂಕಿಗೆ ಒಳಗಾಗಿಯೇ ಹುಟ್ಟುವ ಸಾಧ್ಯತೆ ಇರುತ್ತದೆ ಎಂದು ಉತ್ತರಿಸಿದ್ದಾರೆ ಎಂದು ವೈದ್ಯರು ಉತ್ತರಿಸಿದ್ದಾರೆ ಎಂದು ಕ್ವಾರಂಟೈನ್​ನಲ್ಲಿರುವ ವ್ಯಕ್ತಿ ತಿಳಿಸಿದ್ದಾರೆ.

ಇದೇ ನರ್ಸಿಂಗ್​ ಹೋಂನ ರಿಸಪ್ಷನಿಸ್ಟ್​ಗೂ ಕರೊನಾ ವೈರಸ್​ ತಗುಲಿದೆ. (ಏಜೆನ್ಸೀಸ್​),

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net