3 ಕೋಟಿ ಮೌಲ್ಯದ ಇ-ಸಿಗರೇಟ್ ಜಪ್ತಿ: ಕೇರಳ ಮೂಲದ ಆರೋಪಿಯ ಬಂಧನ

Crime Logo
Published on

ಬೆಂಗಳೂರು : ಕೇಂದ್ರ ಸರ್ಕಾರ ನಿಷೇಧಿಸಿರುವ ಎಲೆಕ್ಟ್ರಾನಿಕ್ ಸಿಗರೇಟುಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಆತನಿಂದ ೩ ಕೋಟಿ ರೂ. ಮೌಲ್ಯದ ಇ-ಸಿಗರೇಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ಮೂಲದ ಶೋಯೆಬ್ ಬಂಧಿತ ಆರೋಪಿ.


ಆರೋಪಿ ಶೋಯೆಬ್ ಕೆಲ ಕಾಲ ದುಬೈನಲ್ಲಿದ್ದು ಭಾರತಕ್ಕೆ ಮರಳಿದ್ದ. ಬಳಿಕ ಬೆಂಗಳೂರಿಗೆ ಬಂದು ಸುದ್ದಗುಂಟೆಪಾಳ್ಯದ ಬಿಟಿಎಂ ಲೇಔಟ್‌ನಲ್ಲಿರುವ ಸಹೋದರನ ಮನೆಯಲ್ಲಿ ವಾಸವಿದ್ದ. ದುಬೈಯಿಂದ ದೆಹಲಿಗೆ, ನಂತರ ದೆಹಲಿಯಿಂದ ಬೆಂಗಳೂರಿಗೆ ಕೊರಿಯರ್ ಮೂಲಕ ಇ-ಸಿಗರೇಟ್ ತರಿಸಿಕೊಳ್ಳುತ್ತಿದ್ದ. ಆರೋಪಿ ಮನೆಯಲ್ಲಿಯೇ ಅವುಗಳನ್ನು ಸಂಗ್ರಹಿಸಿಟ್ಟುಕೊಂಡು ಗ್ರಾಹಕರುಗಳಿಗೆ ಸರಬರಾಜು ಮಾಡುತ್ತಿದ್ದ. ಒಂದು ಸಿಗರೇಟ್‌ಗೆ ಐದರಿಂದ ಆರು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಆರೋಪಿಯ ಕುರಿತು ಖಚಿತವಾದ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಸಿಸಿಬಿಯ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ ೩ ಕೋಟಿ ರೂ.ಮೌಲ್ಯದ ೬ ಸಾವಿರ ಇ-ಸಿಗರೇಟುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನು ಹಲವು ಮಂದಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಅವರಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net