

ಚಿಕ್ಕಬಳ್ಳಾಪುರ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಊರಿಗೆ ತೆರಳುತ್ತಿದ್ದ ವೇಳೆ ಟಿಟಿ ವಾಹನ ಭೀಕರ ಅಪಘಾತಕ್ಕೀಡಾಗಿ ಮೂವರು ಭಕ್ತರು ಉಸಿರು ಚೆಲ್ಲಿದ್ದಾರೆ. ಈ ಮೂವರು ಬಾಗೇಪಲ್ಲಿ ಸೇರಿದವರು ಎನ್ನಲಾಗಿದೆ. 9 ಜನರು ಗಂಭೀರವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಆಂಧ್ರದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯ ಕುರುಬಲಕೋಟ ಮಂಡಲಂ ಚೆನ್ನಾಮರ್ರಿ ಮಿಟ್ಟ ಬಳಿ ಈ ದುರ್ಘಟನೆ ಸಂಭವಿಸಿದೆ. ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದ ಮೇಘರ್ಷ್ (17), ಚರಣ್ (17) ಹಾಗೂ ಶ್ರಾವಣಿ (28) ಮೃತ ದುರ್ದೈವಿಗಳು. ಘಟನೆಯಲ್ಲಿ ಇನ್ನು 9 ಜನರು ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನೂ ಮದನಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಟಿ ವಾಹನಕ್ಕೆ ಎದುರಿಗಿದ್ದ ವಾಹನ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಟಿಟಿ ವಾಹನದಲ್ಲಿದ್ದವರು ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಿಂದ ತಿರುಪತಿಗೆ ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ.