

ಹೊಸನಗರ: ಗ್ರಾಮೀಣ ಪ್ರದೇಶದಲ್ಲಿ 9 ವರ್ಷಗಳ ಹಿಂದೆ ಸ್ಥಾಪನೆಯಾದ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರ ಸಂಘ ಪ್ರಸಕ್ತ ವರ್ಷ 3.61 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಸ್.ಜೆ.ಹೂವಪ್ಪ ಗೌಡ ಹೇಳಿದರು.
ತಾಲೂಕಿನ ಕರಿಮನೆಯಲ್ಲಿ ಆಯೋಜಿಸಿದ್ದ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, 2023-24ರಲ್ಲಿ 1.21 ಕೋಟಿ ರೂ. ವ್ಯವಹಾರ ದಾಖಲಿಸಿದ್ದು, 400ಕ್ಕೂ ಹೆಚ್ಚು ಸದಸ್ಯರಿಗೆ 81 ಲಕ್ಷ ರೂ. ಸಾಲ ನೀಡಲಾಗಿದೆ. 3 ಲಕ್ಷ ರೂ. ಇದ್ದ ಷೇರು ಬಂಡವಾಳ 8 ಲಕ್ಷ ರೂ.ಗೆ ಏರಿಕೆಯಾಗಿದೆ. ಒಟ್ಟು 708 ಸದಸ್ಯರಿದ್ದಾರೆ ಎಂದರು.
ನಮ್ಮ ಭಾಗದಲ್ಲಿ ಬಡರೈತರು ಹೆಚ್ಚಿದ್ದು, ಅವರಿಗೆ ಉತ್ತೇಜನ ನೀಡುವ ಸಲುವಾಗಿ ಅಡಕೆ ವ್ಯಾಪಾರ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಗ್ರಾಮೀಣ ಸಾಲ, ಪಿಗ್ಮಿ ಸಾಲ, ಜಾಮೀನು ಸಾಲ ಹಾಗೂ ವಾಹನ ಸಾಲ ಸೌಲಭ್ಯವಿದೆ. ಮರಣೋತ್ತರ ನಿಧಿ ಸ್ಥಾಪಿಸಲಾಗಿದೆ. ಠೇವಣಿದಾರರಿಗೆ ಆಕರ್ಷಕ ಶೇ 8.5 ಬಡ್ಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಲೆಕ್ಕಪರಿಶೋಧಕ ವಿಜೇಂದ್ರ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥಾಪಕ ಅಧ್ಯಕ್ಷ ಕೆ.ಕೆ.ರಾಮಣ್ಣ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಲಕ್ಷ್ಮೀ, ಉಪಾಧ್ಯಕ್ಷ ಪ್ರವೀಣ ಕೆ. ಗೌಡ, ನಿರ್ದೇಶಕರಾದ ಎಚ್.ವಾಸಪ್ಪ, ಎಸ್.ಎಸ್.ಸುಧಾಕರ, ಎ.ಮೂರ್ತಿ, ಎಂ.ರತ್ನಾಕರ, ಸುಂದರಾಂಗಿ ನಾಗೇಶ ಭಟ್, ವಿಲ್ಮಾ ಡಿಸೋಜ, ಎಚ್.ಎಸ್.ಗುರುಮೂರ್ತಿ, ಎಚ್.ಪಿ.ನಾಗೇಂದ್ರ, ಟಿ.ಆರ್.ಸುರೇಶ, ಕೆ.ಮಹೇಂದ್ರ, ಶ್ವೇತಾ ಉಪಸ್ಥಿತರಿದ್ದರು.