

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಮಾರ್ಚ್/ಏಪ್ರಿಲ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ, ಜೂನ್‌ನಲ್ಲಿ ನಡೆದ ಮೊದಲ ಹಾಗೂ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆದ 2ನೇ ಪೂರಕ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಸಂಭಾವನೆ ಮತ್ತು ಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಶಿಕ್ಷಕ ಮತ್ತು ಆಡಳಿತ ಮಂಡಳಿ ಫೋರಂ ಆಗ್ರಹಿಸಿದೆ.
ಸರ್ಕಾರವು ನಡೆಸಿದ 3 ಪರೀಕ್ಷೆಗಳ ಮೌಲ್ಯಮಾಪನದ ಸಂಭಾವನೆಯನ್ನು ಬಿಡುಗಡೆ ಮಾಡಿಲ್ಲ. ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲಿ ಭಾಗಿಯಾಗುವ ಮೂಲಕ ಮಂಡಳಿಯ ಯಶಸ್ಸಿಗೆ ಕಾರಣಕರ್ತರಾಗಿದ್ದೇವೆ. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪರೀಕ್ಷಾ ಶುಲ್ಕವನ್ನು ಮೌಲ್ಯಮಾಪಕರಿಗೆ ವರ್ಗಾಯಿಸಲು ವಿಳಂಬವೇಕೆ? ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಬಿಡುಗಡೆಗೆ ವಿಳಂಬ ಧೋರಣೆ ತೋರಿದ್ದಲ್ಲಿ ಮುಂದಿನ ಅಕ್ಟೋಬರ್ 3ರಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಫೋರಂ ಅಧ್ಯಕ್ಷ ಎ.ಪಿ. ರಂಗನಾಥ ಎಚ್ಚರಿಕೆ ನೀಡಿದ್ದಾರೆ.