

ಬೆಂಗಳೂರು: ಬೆಂಗಳೂರು ನಗರದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳ ಪರಿಶೀಲನೆ ಮಾಡಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) 2-3 ದಿನಗಳಲ್ಲಿ ವರದಿ ಕೊಡಲಿದೆ. ಆನಂತರ ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ನೆಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ 2033ರವರೆಗೂ ನಿರ್ಬಂಧವಿದೆ. ಈಗಿನಿಂದಲೇ ಅಗತ್ಯ ಪ್ರಕ್ರಿಯೆ ಆರಂಭಿಸಿದರೆ ಆ ಸಮಯಕ್ಕೆ ಮುಗಿಸಬಹುದು. ಒಂದು ವಿಮಾನ ನಿಲ್ದಾಣ ನಿರ್ಮಿಸಲು ಕನಿಷ್ಠ ಐದಾರು ವರ್ಷ ಬೇಕಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಎಎಐ ಪರಿಶೀಲಿಸಿರುವ ಎರಡು ಸ್ಥಳಗಳಿಗೂ ಹಸಿರು ನಿಶಾನೆ ತೋರಿಸಬಹುದು. ರಾಜ್ಯ ಸರ್ಕಾರ ಒಂದು ಕಡೆ ಐದಾರು ಸಾವಿರ ಎಕರೆ ಭೂಮಿ ಕೊಡಬಹುದು. ಆದರೆ, ವಿಮಾನ ನಿಲ್ದಾಣ ನಿರ್ಮಾಣ ಸಂಸ್ಥೆಗಳು ಇದು ಆರ್ಥಿಕವಾಗಿ ಲಾಭದಾಯಕವೇ ಎನ್ನುವಂತಹ ಅಂಶಗಳನ್ನು ನೋಡುತ್ತವೆ. ಇದೊಂದು ಜಟಿಲವಾದ ಕೆಲಸ ಎನ್ನುವುದು ನನಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ.
ದೇಶ ನವದೆಹಲಿ (ನೋಯಿಡಾ) ಮತ್ತು ಮುಂಬೈ (ನವೀಮುಂಬೈ) ನಗರಗಳು ಮಾತ್ರ ಎರಡೆರಡು ವಿಮಾನ ನಿಲ್ದಾಣ ಹೊಂದಿವೆ. ಆ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿದ ಸಂಸ್ಥೆಗಳ ಜತೆಯೂ ಮಾತನಾಡುತ್ತೇವೆ. ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಿರುವ ವಿಚಾರವೂ ಗಮನದಲ್ಲಿದೆ ಎಂದರು. ಉತ್ತರ ಕರ್ನಾಟಕದ ಶಾಸಕರು ತುಮಕೂರಿಗೆ ಸಮೀಪದಲ್ಲಿ ವಿಮಾನ ನಿಲ್ದಾಣ ಬರಲಿ ಎನ್ನುತ್ತಿದ್ದಾರೆ. ಕೆಲವರು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಯೋಜನೆ ಬಂದರೆ ಅನುಕೂಲ ಎನ್ನುತ್ತಿದ್ದಾರೆ. ಪ್ರಯಾಣಿಕರ ದಟ್ಟಣೆ, ಕೈಗಾರಿಕಾ ಅಗತ್ಯ ಇತ್ಯಾದಿ ಅಂಶಗಳನ್ನು ಪರಿಗಣನೆಗೆ ಬರಲಿವೆ. ಅಗತ್ಯ ಮತ್ತು ಅನುಕೂಲ ಎರಡನ್ನೂ ನೋಡಲಾಗುವುದು ಎಂದು ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.