

ವಿಜಯಪುರ : ಕುರುಬ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ನ.29 ರಂದು ಬಾಗಲಕೋಟೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಕುರುಬ ಎಸ್‌ಟಿ ಹೋರಾಟ ಸಮಿತಿ ರಾಜ್ಯ ಸಹ ಕಾರ್ಯರ್ದರ್ಶಿ ರಾಜು ಬಿರಾದಾರ ತಿಳಿಸಿದರು.
ಈ ಸಮಾವೇಶದಲ್ಲಿ ವಿಜಯಪುರ ಜಿಲ್ಲೆಯಿಂದ 25 ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ. ಹಾಲುಮತ ಸಮಾಜ ಪರಿಶಿಷ್ಟ ಪಂಗಡ (ಎಸ್.ಟಿ.) ಪಟ್ಟಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಅನೇಕ ದಿನಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟವನ್ನು ಪ್ರಸ್ತುತ ತೀವ್ರಗೊಳಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುರುಬರು ಮೂಲತಃ ಬುಡಕಟ್ಟು ಜನಾಂಗದವರಾಗಿದ್ದು, ರಾಜ್ಯದಲ್ಲಿ ಜೇನು ಕುರುಬ, ಕಾಡು ಕುರುಬ, ಗೊಂಡ, ರಾಜಗೊಂಡ, ಕುರುಬ ಜಾತಿ ಪಂಗಡಗಳಿವೆ. ಹಲವಾರು ವರ್ಷದಿಂದ ಕುರುಬ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರುವಂತೆ ಹೋರಾಟ ಮಾಡುತ್ತಾ ಬಂದಿವೆ. ಆದರೂ ಸಹ ನಮ್ಮ ಸಮಾಜದ ನ್ಯಾಯಯುತ ಬೇಡಿಕೆ ಈಡೇರಿಲ್ಲ. ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಕುರುಬರನ್ನು ಬುಡಕಟ್ಟು ಜನಾಂಗವೆಂದು ಕರೆದಿದ್ದರು. ಆದರೆ ರಾಜ್ಯದಲ್ಲಿ ಕುರುಬರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ರವಿ ಕಿತ್ತೂರ ಮಾತನಾಡಿ, ಹಾಲುಮತ ಸಮಾಜ ಎಸ್.ಟಿ. ಪಟ್ಟಿಗೆ ಸೇರಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಹಂತದ ಹೋರಾಟ ಕೈಗೊಳ್ಳಲಾಗುತ್ತಿದ್ದು, ಎರಡನೇಯ ಹಂತದ ಹೋರಾಟದ ಭಾಗವಾಗಿ ಜ.15 ರಿಂದ ೆ.7 ರವರೆಗೆ ಕಾಗಿನೆಲೆ ಮಹಾಸಂಸ್ಥಾನಪೀಠದ ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ, ಸುಕ್ಷೇತ್ರ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ವಿವರಿಸಿದರು. ಫೆಬ್ರುವರಿ 7 ರಂದು ಬೆಂಗಳೂರಿನಲ್ಲಿ ಬೃಹತ್ ಸಭೆ ನಡೆಯಲಿದೆ. ಸಮಾವೇಶದಲ್ಲಿ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ವಿವರಿಸಿದರು. ಮುಖಂಡರಾದ ರಾಜಶೇಖರ ಕುರಿಯವರ, ಸಾಬು ಮಾಶ್ಯಾಳ, ರಾಜು ಕಂಬಾಗಿ, ಶಿಲ್ಪಾ ಕುದರಗೊಂಡ, ಕರೆಪ್ಪ ಬಸ್ತಾಳ, ಸಂಗಮೇಶ ಓಲೆಕಾರ ಇನ್ನಿತರರಿದ್ದರು.