28ಕ್ಕೆ ಯಗಟಿ ಗ್ರಾಮದಲ್ಲಿ ಕನಕ ಜಯಂತಿ

24KDR1 kanaka
ಕಡೂರಿನಲ್ಲಿ ಕನಕದಾಸರ ಮಹೋತ್ಸವ ಆಚರಣೆ ಆಹ್ವಾನ ಪತ್ರಿಕೆಯನ್ನು ದೊಣ್ಣೇಕೋರನಹಳ್ಳಿ ಉಮೇಶ್ ಬಿಡುಗಡೆಗೊಳಿಸಿದರು. ಹೋಚಿಹಳ್ಳಿ ಭೋಗಪ್ಪ, ಶರತ್‌ಕೃಷ್ಣಮೂರ್ತಿ, ಗೋವಿಂದಪ್ಪ, ಕೆ.ಎಚ್.ಶಂಕರ್, ಕೆ.ಆರ್. ಸುರೇಶ್, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಕೆ.ಜಿ.ಲೋಕೇಶ್ವರ್ ಮತ್ತಿತರರಿದ್ದರು.
Published on

ಕಡೂರು: ತಾಲೂಕಿನ ಯಗಟಿ ಗ್ರಾಮದಲ್ಲಿ ಡಿ.28ರಂದು ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವವನ್ನು ಅರ್ಥಪೂರ್ಣ, ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಕನಕ ಜಯಂತಿ ಆಚರಣಾ ಮಹೋತ್ಸವ ಸಮಿತಿ ಅಧ್ಯಕ್ಷ ದೊಣ್ಣೇಕೋರನಹಳ್ಳಿ ಉಮೇಶ್ ತಿಳಿಸಿದರು.

ಪ್ರವಾಸಿಮಂದಿರದಲ್ಲಿ ಮಂಗಳವಾರ ಜಯಂತಿ ಆಚರಣಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಯಗಟಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ಸಮಾರಂಭ ನಡೆಯಲಿದೆ. ಕನಕದಾಸರ ಚಿಂತನೆಗಳ ಅವಲೋಕನದ ಜತೆ ವಿಶೇಷ ಸಮಾರಂಭವನ್ನು ಈ ಬಾರಿ ಗ್ರಾಮೀಣ ಭಾಗದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ವಿವಿಧ ಉಪಸಮಿತಿಗಳನ್ನು ರಚಿಸಿಕೊಂಡು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಮಿಕ ಸಚಿವ ಎಸ್.ಸಂತೋಷ್ ಲಾಡ್ ಸಮಾರಂಭ ಉದ್ಘಾಟಿಸಲಿದ್ದು ಕಾಗಿನೆಲೆಯ ಕೆ.ಆರ್.ನಗರ ಕನಕ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಶಾಸಕ ಕೆ.ಎಸ್.ಆನಂದ್ ಸೇರಿದಂತೆ ಜಿಲ್ಲೆಯ ಶಾಸಕರು, ವಿಶೇಷವಾಗಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಭಾಗವಹಿಸಲಿದ್ದಾರೆ. ಹೆಚ್ಚುವರಿ ಜಿಲ್ಲಾ ನೊಂದಣಾಧಿಕಾರಿ ಎಚ್.ಸಿ.ಲೋಕೇಶ್ ಉಪನ್ಯಾಸ ನೀಡಲಿದ್ದಾರೆ. ಸಮಾರಂಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೋಚಿಹಳ್ಳಿ ಭೋಗಪ್ಪ ಮಾತನಾಡಿ, ಯಗಟಿ ಗ್ರಾಮದ ಕಳ್ಳಿಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಗುತ್ತದೆ. ಸಮಾರಂಭದಲ್ಲಿ ಅತಿಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾನ್ವಿತರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಬಂಧುಗಳನ್ನು ಪುರಸ್ಕರಿಸಲಾಗುವುದು ಎಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷ ಚನ್ನಪಿಳ್ಳೇಗೋವಿಂದಪ್ಪ, ಜಿಪಂ ಮಾಜಿ ಸದಸ್ಯ ಶರತ್‌ಕೃಷ್ಣಮೂರ್ತಿ, ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್, ಮರುಗುದ್ದಿ ಮನು, ಖಜಾಂಚಿ ಕೆ.ಆರ್.ಸುರೇಶ್, ವಕ್ತಾರ ಕೆ.ಜಿ.ಲೋಕೇಶ್ವರ್, ಕುರುಬ ಸಮಾಜದ ಮುಖಂಡರಾದ ಕೆ.ಜಿ.ಶ್ರೀನಿವಾಸ್‌ಮೂರ್ತಿ, ಕೆ.ಎಚ್.ಶಂಕರ್, ಹಳೇಪೇಟೆ ತಿಪ್ಪೇಶ್, ಆಸಂಧಿ ಕಲ್ಲೇಶ್, ಕಂಸಾಗರ ಸೋಮಶೇಖರ್, ಜಿ.ರೇವಣ್ಣ, ಎಂ.ಬಿ. ಮಂಜುನಾಥ್, ಯರದಕೆರೆ ಓಂಕಾರ್, ಧರ್ಮರಾಜ್, ಶಿವು, ಎನ್.ಎಚ್.ನಂಜುಂಡಸ್ವಾಮಿ, ಶಾಂತಪ್ಪ, ರಂಗನಾಥ್, ತ್ಯಾಗರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net