ಒಂಬತ್ತು ವರ್ಷ ಜತೆಗಿದ್ದು ಕೈಕೊಟ್ಟ ಲವರ್​ ಮೇಲೆ ಆಸಿಡ್​ ದಾಳಿ ನಡೆಸಿದ ಮಹಿಳೆಯ ಬಂಧನ!

Acide
Published on

ಅಗರ್ತಲ: ಲವರ್​ ಮೇಲೆ ಆಸಿಡ್​ ದಾಳಿ ನಡೆಸಿದ ಆರೋಪದ ಮೇಲೆ 27 ವರ್ಷದ ಮಹಿಳೆಯೊಬ್ಬಳನ್ನು ಬಂಧಿಸಿರುವ ಘಟನೆ ತ್ರಿಪುರಾ ರಾಜಧಾನಿ ಅಗರ್ತಲದ 50 ಕಿ.ಮೀ ದೂರದಲ್ಲಿರುವ ಖೋವೈ ಜಿಲ್ಲೆಯ ಬೆಲ್ಛೆರ್ರಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸಂಬಂಧವನ್ನು ಮುಂದುವರಿಸಲು ಒಪ್ಪದ ಲವರ್​ ಮೇಲೆ ಮಹಿಳೆ ಕಳೆದ ವಾರ ಆಸಿಡ್​ ದಾಳಿ ಮಾಡಿದ್ದಳು. ಆರೋಪಿಯನ್ನು ಬೀನಾ ಶಾಂತಲ್​ ಎಂದು ಗುರುತಿಸಲಾಗಿದ್ದು, ಆಕೆಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

ಆರೋಪಿ ಬೀನಾ, 30 ವರ್ಷದ ಸೋಮೆನ್​ ಶಾಂತಲ್​ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ. 2010ರಲ್ಲಿ ಮನೆ ಬಿಟ್ಟು ಓಡಿ ಬಂದ ಜೋಡಿ ಪುಣೆಯಲ್ಲಿ ಕಳೆದ 9 ವರ್ಷದಿಂದ ಲಿವ್​ ಇನ್​ ರಿಲೇಶನ್​ನಲ್ಲಿದ್ದರಂತೆ. ಇಬ್ಬರು ಸಹ ತ್ರಿಪುರದಲ್ಲಿ ನೆರೆಹೊರೆಯವರಾಗಿದ್ದರು.

ಪುಣೆಯಲ್ಲಿ ಇರುವಾಗ ಬೀನಾ ಗೃಹಿಣಿಯಾಗಿ, ಬಿಡುವಿನ ಸಮಯದಲ್ಲಿ ಇತರೆ ಕೆಲಸ ಮಾಡಿಕೊಂಡು ಸೋಮೆನ್​ ಓದಿಗೆ ನೆರವಾಗುತ್ತಿದ್ದಳು. ಕಾಲೇಜಿನಲ್ಲಿ ಓದು ಮುಗಿದಾಗ ಸೋಮೆನ್​ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಲು ಆರಂಭಿಸಿದ್ದ. ಈ ನಡುವೆ 2019ರಲ್ಲಿ ತ್ರಿಪುರಾಗೆ ಹಿಂದಿರುಗಿದ ಬಳಿಕ ಬೀನಾಳೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದ. ಆತನಿಗಾಗಿ ಸಾಕಷ್ಟು ಹುಡುಕಾಡಿ ತುಂಬಾ ಬೀನಾ ತುಂಬಾ ನೋವು ಅನುಭಿವಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅನೇಕ ದಿನಗಳ ಬಳಿಕ ಅ. 19ರಂದು ಖೋವೈನಲ್ಲಿ ಸೋಮೆನ್​, ಬೀನಾ ಕಣ್ಣಿಗೆ ಬಿದ್ದಿದ್ದ. ಈ ವೇಳೆ ಮಾತನಾಡಿಸಲು ಪ್ರಯತ್ನಿಸಿದ್ದಾಳೆ. ಆದರೆ, ಆತ ಮಾತನಾಡಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಬೀನಾ, ಸೋಮೆನ್​ ಮೇಲೆ ಆಸಿಡ್​ ದಾಳಿ ನಡೆಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಸೋಮೆನ್​ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗೋವಿಂದ್​ ಬಲ್ಲಭ್​ ಪಂತ್​ (ಜಿಬಿಪಿ) ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಸಂತ್ರಸ್ತನ ಕುಟುಂಬ ಖೋವೈ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ತನಿಖಾಧಿಕಾರಿ ಸೈಯದ್​ ಉದ್ದೀನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net