

ಚಿತ್ರದುರ್ಗ: ಮಹಿಳೆ ಸೇವಾವಲಯದ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದರೂ ಲಿಂಗ ಅಸಮಾನತೆ ಇನ್ನೂ ಇದೆ ಎಂದು ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶೆ ಉಜ್ವಲಾ ವೀರಣ್ಣ ಸಿದ್ದಣ್ಣನವರ್ ವಿಷಾದಿಸಿದರು.
ನಗರದ ಎಸ್‌ಜೆಎಂ ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಐಡಿಎ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಂತ ವೈದ್ಯರ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಮಹಿಳೆ ಅಬಲೆ, ದೈಹಿಕ ಸದೃಢತೆ ಇಲ್ಲ ಎಂಬ ಮನೋಭಾವ ಸರಿಯಲ್ಲ, ಸಮಾನ ಅವಕಾಶಗಳನ್ನು ನೀಡಿದರೆ ಆಕೆ ಕೂಡ ತಾನು ಪ್ರತಿಭಾವಂತೆ ಎಂಬುದನ್ನು ಸಾಬೀತು ಪಡಿಸುತ್ತಾಳೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಪ್ರತಿಭೆಗಳಿಗೆ ಸದಾವಕಾಶಗಳನ್ನು ಒದಗಿಸಿದರೆ ಆರೋಗ್ಯವಂತ, ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಬಾಗಲಕೋಟೆ ಪಿಎಂಎನ್‌ಎಂ ದಂತ ವೈದ್ಯಕೀಯ ಕಾಲೇಜಿನ ಡಾ. ಪ್ರಹ್ಲಾದ್ ಶರಫ್, ಕಾನೂನು ಬಾಹಿರ ಮತ್ತು ಕಾನೂನಾತ್ಮಕ ವಿಚಾರಗಳ ಕುರಿತು ಉಪನ್ಯಾಸ ನೀಡಿದರು. ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಪ್ರಾಂಶುಪಾಲ ಎಂ.ಎಚ್. ರಘುನಾಥ ರೆಡ್ಡಿ, ಉಪ ಪ್ರಾಚಾರ್ಯ ಡಾ. ಟಿ.ವಿ. ಹರಿಣಿ, ಡಾ. ಗಜಾಲಾ, ಡಾ. ಪ್ರಣೀತಾ ಇದ್ದರು. ಡಾ. ಸ್ಫೂರ್ತಿ ಹಾಗೂ ಡಾ. ಬೃಂದಾ ನಿರೂಪಿಸಿದರು.