

ಮಧುಗಿರಿ: ರಾಜ್ಯದಿಂದ 26 ಎಂಪಿಗಳು ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಅವರಿಂದ ರಾಜ್ಯಕ್ಕೆ ಏನೂ ಪ್ರಯೋಜನವಾಗಿಲ್ಲ. ಅವರು ಬಿಡಿಗಾಸೂ ಕರ್ನಾಟಕಕ್ಕೆ ತಂದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ದಾಳಿ ಮಾಡಿದರು.
ಪಟ್ಟಣದ ದೊಡ್ಡಪೇಟೆ ರಸ್ತೆಯಲ್ಲಿರುವ ಆಶುಖಾನೆ ಸಮೀಪ ಸೋಮವಾರ ಸಂಜೆ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹಿಂದು-ಮುಸ್ಲಿಂ ಸಮುದಾಯದವರು ಅನ್ಯೋನ್ಯತೆಯಿಂದ ಬದುಕಬೇಕು ಎಂಬುದೇ ಜೆಡಿಎಸ್ ಉದ್ದೇಶ. ಆದರೆ ಬಿಜೆಪಿಯವರು ವೋಟಿಗಾಗಿ ಸಮಾಜವನ್ನು ಒಡೆಯುತ್ತಿದ್ದಾರೆ. ಬಿಜೆಪಿಯವರು ಟಿಪ್ಪು ಸುಲ್ತಾನ್ ಒಬ್ಬ ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದು, ಟಿಪ್ಪು ವಿರುದ್ಧ ಮಾತನಾಡುತ್ತಾರೆ. ಆದರೆ ಪೇಶ್ವೆಗಳು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ ಮಠದ ರಕ್ಷಣೆಗೆ ನಿಂತವ ಇದೇ ಟಿಪ್ಪು. ಇದರ ನೆನಪಿಗಾಗಿ ಇಂದಿಗೂ ಶೃಂಗೇರಿಯಲ್ಲಿ ಮೊದಲ ಪೂಜೆಯನ್ನು ಸಲಾಂ ಆರತಿ ಎಂದು ಮಾಡುತ್ತಾರೆ, ಇದನ್ನು ಬಿಜೆಪಿಯವರು ಅರಿಯಬೇಕು ಎಂದರು.
ಮೋದಿ ದೇಶವನ್ನು ಹಾಳು ಮಾಡುತ್ತಿದ್ದು, ಅದಕ್ಕಾಗಿ ಅವರ ಮೇಲೆ ನಮಗೆ ಸಿಟ್ಟಿದೆ. ಕರ್ನಾಟಕದವರ‌್ಯಾರೂ ಗುಜರಾತಿಗೆ ಹೋಗಿ ಪಾನೀಪುರಿ ಮಾರುತ್ತಿಲ್ಲ. ಅಲ್ಲಿನವರೇ ರಾಜ್ಯಕ್ಕೆ ಬಂದು ಪಾನೀಪುರಿ ಮಾರಿ ಜೀವನ ನಿರ್ವಹಿಸುತ್ತಿದ್ದು, ಎಲ್ಲಿದೆ ಗುಜರಾತ್ ಮಾಡೆಲ್ ಎಂದು ಛೇಡಿಸಿದರು. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಫಿ, ಮುಖಂಡರಾದ ಕಾರ್ತಿಕ್ ವೀರಭದ್ರಯ್ಯ, ತುಂಗೋಟಿ ರಾಮಣ್ಣ, ತಿಮ್ಮರಾಜು, ಪುರಸಭಾ ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಲ್ ಗಂಗರಾಜು, ಎಂ.ಎಸ್.ಚಂದ್ರಶೇಖರ ಬಾಬು, ಇದ್ದರು.
ಬಿಜೆಪಿ ಸರ್ಕಾರದಿಂದ ರೂಪಾಯಿ ಅನುದಾನ ತರಲು ಹೋರಾಟ ನಡೆಸಬೇಕಾದ ಪರಿಸ್ಥಿತಿಯಿದ್ದು, ಆದರೂ 1147 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಮಧುಗಿರಿಯ ಋಣ ನನ್ನ ಮೇಲಿದೆ ಎಂದು ಕುಮಾರಸ್ವಾಮಿ ಯಾವಾಗಲೂ ಹೇಳುತ್ತಿರುತ್ತಾರೆ. ಮುಂದೆ ಕುಮಾರಸ್ವಾಮಿ ಸಿಎಂ ಆಗಲಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. | ಎಂ.ವಿ.ವೀರಭದ್ರಯ್ಯ ಶಾಸಕ
ರಾಜಣ್ಣ ಬಿಜೆಪಿಗೆ ಹೋಗಲ್ಲ ಎನ್ನಲು ಗ್ಯಾರಂಟಿ ಏನು?: ನನಗೆ ಕೆ.ಎನ್.ರಾಜಣ್ಣನ ಮೇಲೆ ಸಿಟ್ಟಿಲ್ಲ, ಅನುಕಂಪವಿದೆ. ಈ ಹಿಂದೆ ಅವರು ದೊಡ್ಡೇರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ, ದೇವೇಗೌಡರಿಗೆ 102 ಡಿಗ್ರಿ ಜ್ವರವಿದ್ದರೂ ರಾಜಣ್ಣನ ಪರ ಪ್ರಚಾರ ನಡೆಸಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಆದರೆ ಇದೇ ರಾಜಣ್ಣ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ಕಾರಣರಾದರು. ಕಳೆದ ಸಲ ಬಿಜೆಪಿ ಗೆಲ್ಲಿಸಿದ ರಾಜಣ್ಣ ಮುಂದೆ ಬಿಜೆಪಿಗೆ ಹೋಗುವುದಿಲ್ಲ ಎನ್ನಲು ಗ್ಯಾರಂಟಿ ಏನು...? ಎಂದು ಇಬ್ರಾಹಿಂ ಪ್ರಶ್ನಿಸಿದರು.
ಕಾಂಗ್ರೆಸ್‌ನಲ್ಲಿ ಪರಮೇಶ್ವ, ಸಿದ್ದರಾಮಯ್ಯ, ಖರ್ಗೆ ಮತ್ತು ಡಿಕೆಶಿ ನಡುವೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ಸಾಗಲಿ, ಬಿಜೆಪಿಯಾಗಲಿ ಅಧಿಕಾರ ಚುಕ್ಕಾಣಿ ಹಿಡಿಯುವುದಿಲ್ಲ. ಸಿ.ಎಂ.ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷ