25ಕ್ಕೆ ಶ್ರೀ ಬಲಮುರಿ ಮಹಾಗಣಪತಿ ದೇವಸ್ಥಾನ ಲೋಕಾರ್ಪಣೆ

16ald 1a temple
ಆಲ್ದೂರಿನಲ್ಲಿ ನಿರ್ಮಿಸಿರುವ ಶಿಲಾಮಯ ಗಣಪತಿ ದೇವಸ್ಥಾನ.
Published on

ಆಲ್ದೂರು: ಪಟ್ಟಣದಲ್ಲಿ ಶಿಲೆಯಲ್ಲಿ ನಿರ್ಮಾಣವಾಗಿರುವ ಶ್ರೀ ಬಲಮುರಿ ಮಹಾಗಣಪತಿ ದೇವಸ್ಥಾನ ಫೆ.25ಕ್ಕೆ ಲೋಕಾರ್ಪಣೆಗೊಳ್ಳಲಿದೆ.

48 ವರ್ಷಗಳ ಹಿಂದೆ ಮಾಜಿ ಶಾಸಕ ಸಿ.ಎ.ಚಂದ್ರೇಗೌಡ ನೇತೃತ್ವದಲ್ಲಿ ಶ್ರೀ ಬಲಮುರಿ ಗಣಪತಿ ದೇವಾಲಯ ನಿರ್ಮಿಸಲಾಗಿತ್ತು. ಶಿಥಿಲಾವಸ್ಥೆ ತಲುಪಿದ್ದ ದೇವಾಲಯವನ್ನು ನೆಲಸಮಗೊಳಿಸಿ

ಆ ಜಾಗದಲ್ಲಿ ಇದೀಗ ಸಿ.ಎ.ಚಂದ್ರೇಗೌಡ ಅವರ ಪುತ್ರ ಸಿ.ಸುರೇಶ್ ಮುಂದಾಳತ್ವದಲ್ಲಿ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಿಸಲಾಗಿದೆ.

ಮುರುಡೇಶ್ವರದ ಶಿಲ್ಪಿ ಮಾಸ್ತಪ್ಪ ಹಾಗೂ ಸಂಗಡಿಗರ ಕೈಚಳಕದಲ್ಲಿ ದೇಗುಲ ಸುಂದರವಾಗಿ ಮೂಡಿಬಂದಿದೆ. ದೇವಾಲಯದ ಹೊರಾಂಗಣದಲ್ಲಿ 36 ಕಂಬಗಳು, ಒಳಾಂಗಣದಲ್ಲಿ 6 ಕಂಬಗಳ

ಕೆತ್ತನೆ, ಛಾವಣಿ, ಮರದ ಬಾಗಿಲುಗಳಲ್ಲಿನ ಕೆತ್ತನೆ ಅದ್ಭುತವಾಗಿವೆ. ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಿರುವ ಶಿವ ಪಾರ್ವತಿ, ಸುಬ್ರಹ್ಮಣ್ಯ, ಅಯ್ಯಪ್ಪಸ್ವಾಮಿ, ಲಕ್ಷ್ಮೀ, ವೀಣಾಪಾಣಿ ಶಾರದೆಯ

ವಿಗ್ರಹಗಳು, ಮುಖ್ಯದ್ವಾರದ ಮುಂಭಾಗ ನಿರ್ಮಿಸಿರುವ ಕಲ್ಲಿನ ಆನೆಗಳು ಕಣ್ಮನ ಸೆಳೆಯುತ್ತಿವೆ.

ಫೆ.21ರಿಂದ ದೇವಾಲಯ ಲೋಕಾರ್ಪಣೆಯ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಅಂದು ಯಾಗ ಶಾಲೆ ಪ್ರವೇಶ, ಗುರು ಪ್ರಾರ್ಥನೆ, ಗಣಹೋಮ, ವಾಸ್ತು ರಾಕ್ಷೋಘ್ನ ಹೋಮ,

ನವಗ್ರಹ ಹೋಮ, ಪ್ರಾಯಶ್ಚಿತ್ತ ಹೋಮ, 22ಕ್ಕೆ ಕಲಶ ಪ್ರತಿಷ್ಠಾಪನೆ, ಬಿಂಬಶುದ್ಧಿ, ಜಲಾದಿವಾಸ, ಆದಿವಾಸ ಹೋಮ, ಭಜನಾ ಮೆರವಣಿಗೆ, ವೀರಗಾಸೆ ಪ್ರದರ್ಶನ ಜರುಗಲಿದೆ.

23ರಂದು ಶ್ರೀ ಕ್ಷೇತ್ರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಶಿ ಅವರಿಂದ ಶ್ರೀ ಗಣಪತಿ ವಿಗ್ರಹದ ಪ್ರತಿಷ್ಠಾಪನೆ ಮತ್ತು ಕಲಶಾರೋಹಣ

ಕಲಶಾಭಿಷೇಕ ನಡೆಯಲಿದೆ. ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಬೇರುಗಂಡಿ ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ

ಪಾಲ್ಗೊಳ್ಳಲಿದ್ದಾರೆ. 24ರಂದು ಪಂಚಾಮೃತ ಅಭಿಷೇಕ, 25ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ದೇವಾಲಯ ಲೋಕಾರ್ಪಣೆ ಮಾಡಲಿದ್ದಾರೆ. ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶರಣರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್,

ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕರಾದ ಸಿ.ಟಿ.ರವಿ. ಟಿ.ಡಿ.ರಾಜೇಗೌಡ, ನಯನಾ ಮೋಟಮ್ಮ, ಎಚ್.ಡಿ.ತಮ್ಮಯ್ಯ, ಎಸ್.ಎಲ್.ಬೋಜೇಗೌಡ, ಡಾ. ಧನಂಜಯ ಸರ್ಜಿ, ಮಾಜಿ

ಸಭಾಪತಿ ಬಿ.ಎಲ್.ಶಂಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜೈರಾಮ್ ರಮೇಶ್, ಆಲ್ದೂರು ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net