25ಕ್ಕೆ ಪಿಎಸಿಎಸ್‌ನ ನೂತನ ಕಟ್ಟಡ ಉದ್ಘಾಟನೆ

pacms
ಪಿಎಸಿಎಸ್‌ನ ನೂತನ ಕಟ್ಟಡದ ಆಮಂತ್ರಣ ಪತ್ರಿಕೆಯನ್ನು ಅಧ್ಯಕ್ಷ ಎಂ.ಎನ್.ಚಂದ್ರಶೇಖರ್ ಮೇಗಳಬೈಲು ಬಿಡುಗಡೆಗೊಳಿಸಿದರು. ಸಂಧ್ಯಾ, ನಟರಾಜ್, ರಜನಿ ಇದ್ದರು.
Published on

ಶೃಂಗೇರಿ: ಮೆಣಸೆ ಹಾಲಂದೂರು ಪಿಎಸಿಎಸ್‌ನ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಸೆ.25ರ ಬೆಳಗ್ಗೆ 10ಕ್ಕೆ ನಡೆಯಲಿದೆ. ಕಟ್ಟಡಕ್ಕೆ ನಬಾರ್ಡ್ ಯೋಜನೆ ಮೂಲಕ 90 ಲಕ್ಷ ರೂ. ಪಾವತಿಯಾಗಿದೆ ಎಂದು ಹಾಲಂದೂರು ಪಿಎಸಿಎಸ್ ಅಧ್ಯಕ್ಷ ಎಂ.ಎನ್.ಚಂದ್ರಶೇಖರ್ ಮೇಗಳಬೈಲು ತಿಳಿಸಿದರು.
ಅವರು ಶನಿವಾರ ಸಂಘದ ಕಚೇರಿಯಲ್ಲಿ ನೂತನ ಕಟ್ಟಡದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಕಟ್ಟಡದ ವಿವಿಧ ಕಾಮಗಾರಿಗೆ ಶಾಸಕ ರಾಜೇಗೌಡ ಅವರು ಪ್ರದೇಶಾಭಿವೃದ್ಧಿ ಅನುದಾನದಿಂದ 15 ಲಕ್ಷ ರೂ, ಎಂಎಲ್‌ಸಿ ಬೋಜೇಗೌಡ 3 ಲಕ್ಷ ರೂ. ಹಾಗೂ ರಾಜ್ಯಸಭಾ ಸದಸ್ಯ ಜಿ.ಎಸ್.ಚಂದ್ರಶೇಖರ್ 4 ಲಕ್ಷ ರೂ., ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ನಿರ್ದೇಶಕ ಡಿ.ಸಿ.ಶಂಕರಪ್ಪ 1 ಲಕ್ಷ ರೂ. ನೀಡಿದ್ದಾರೆ. ಕಟ್ಟಡದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಮೆಣಸೆ ಗ್ರಾಪಂ ಸಹ ಸಂಘದ ಜಾಗದ ವಿಚಾರದಲ್ಲಿ ಸಹಕಾರ ನೀಡಿದ್ದಾರೆ ಎಂದರು.
ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಮತ್ತು ಷೇರುದಾರರಿಗೆ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಒಳಗೊಂಡ ಸೂಪರ್ ಬಜಾರ್ ಪ್ರಾರಂಭಗೊಳ್ಳಲಿದೆ. ಗ್ರಾಹಕರು 10 ಸಾವಿರದಿಂದ ಸ್ಮಾರ್ಟ್ ಕಾರ್ಡ್ ಖರೀದಿಸಿದ್ದರೆ ವ್ಯವಹಾರದಲ್ಲಿ ಬರುವ ಲಾಭಾಂಶದಲ್ಲಿ ಶೇ.50ರಷ್ಟು ಲಾಭವನ್ನು ಅವರಿಗೆ ಮರುಪಾವತಿ ಮಾಡಲಾಗುವುದು. ರೈತರಿಗೆ ಸುಮಾರು 3.5 ಕೋಟಿ ಸಾಲ ನೀಡಲಾಗಿದ್ದು ಸಂಘದ ಬೆಳವಣಿಗೆಗೆ ರೈತರು ಕೈ ಜೋಡಿಸಬೇಕು ಎಂದರು. ಸಮಾರಂಭದಲ್ಲಿ ಉಪಾಧ್ಯಕ್ಷ ಎಂ.ಆರ್.ಆಶೋಕ್, ನಿರ್ದೇಶಕ ನಟರಾಜ್, ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಸಿಇಒ ರಜನಿ ಪದ್ಮನಾಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net