

ಪಾವಗಡ : ರಾಜ್ಯದಲ್ಲಿಯೇ ಮೊದಲನೆ ಬಾರಿಗೆ ಪಾವಗಡ ತಾಲೂಕಿನಾದ್ಯಂತ ಸಾವಯವ ಸ್ಯಾನಿಟೈಸರ್ ಸಿಂಪಡಣೆ ಮೂಲಕ ಕರೊನಾ ಸೋಂಕು ಹರಡದಂತೆ ನಿಯಂತ್ರಿಸಲು ತಾಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಮುಂದಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಬಿ.ಕೆ.ಮುನಿಸ್ವಾಮಿ ತಿಳಿಸಿದರು.
ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಹಾಗೂ ಸುಗುರಾಧನಾ ಮತ್ತು ದಕ್ಷ ಕಂಪನಿ ಚೆನ್ನೈ ಸಹಯೋಗದಲ್ಲಿ ಆಯುಷ್ ಇಲಾಖೆಯಿಂದ ದೃಢೀಕರಿಸಿದ ವೈರಾಣು ನಿವಾರಕ ಸಾವಯವ ದ್ರಾವಣವನ್ನು ಪಾವಗಡ ಪಟ್ಟಣ ಸೇರಿ 252 ಹಳ್ಳಿಗಳಿಗೆ ಡ್ರೋನ್ ಮತ್ತು ಬ್ಲೋಯರ್ ಮೂಲಕ ಸಿಂಪಡಣೆಗೆ ಮಂಗಳವಾರ ತಹಸೀಲ್ದಾರ್ ಕಾರ್ಯಾಲಯದ ಮುಂಭಾಗ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಟ್ರಸ್ಟ್ ವತಿಯಿಂದ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾವಯವ ದ್ರಾವಣ ಸಿಂಪಡಿಸುತ್ತಿದ್ದು, ತಾಲೂಕು ಆಡಳಿತ ಸಂಪೂರ್ಣ ಬೆಂಬಲ ನೀಡಿದೆ, ನಾಲ್ಕು ದಿನ ತಾಲೂಕಿನ ಪ್ರತಿ ಗ್ರಾಮಗಳಲ್ಲೂ ರಾಸಾಯನಿಕ ಸಿಂಪಡಿಸಲಾಗುವುದು ಎಂದು ತಿಳಿಸಿದರು.
ಸುಗುರಾಧನಾ ಚೆನ್ನೈನ ಸಿಇಒ ಕಾರ್ತೀಕ್ ನಾರಾಯಣ್ ಮಾತನಾಡಿ, ತಮಿಳುನಾಡಿನಲ್ಲಿ ಸಾವಯವ ದ್ರಾವಣ ಸಿಂಪಡಿಸಿ ಶೇ.40 ಕೋವಿಡ್ ರೋಗಾಣು ಹರಡುವುದು ಕಡಿಮೆಯಾಗಿದೆ, ತಾಲೂಕಿನ ಪ್ರತಿ ಗ್ರಾಮದಲ್ಲೂ ದ್ರಾವಣ ಸಿಂಪಡಿಸಲಾಗುವುದು, ಸ್ಥಳದ ಅಭಾವ ಇರುವ ಕಡೆ ಡ್ರೋಣ್ ಮೂಲಕ ಮತ್ತು ರಸ್ತೆಗಳಲ್ಲಿ ಬ್ಲೋಯರ್ ಮೂಲಕ ಸಿಂಪಡಿಸಲಾಗುವುದು ಎಂದು ಹೇಳಿದರು.
ತಾಪಂ ಇಒ ಶಿವರಾಜಯ್ಯ ಮಾತನಾಡಿ, ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್‌ನ ಕಾರ್ಯಕ್ಕೆ ತಾಲೂಕಿನ 34 ಗ್ರಾಪಂಗಳ ಪಿಡಿಒಗಳು ಮತ್ತು ಕಾಯದರ್ಶಿಗಳು ಹಾಗೂ ಸಿಬ್ಬಂದಿ ಜತೆಯಿದ್ದು, ದ್ರಾವಣ ಸಿಂಪಡಿಸುವ ಕಾರ್ಯಕ್ಕೆ ಕೈಜೋಡಿಸಲಾಗುವುದು ಎಂದರು. ಮಂಗಳವಾರ ಕಸಬಾ ಹೋಬಳಿಯ ಎಲ್ಲ ಗ್ರಾಮಗಳಲ್ಲೂ ಸ್ಯಾನಿಟೈಸರ್ ಮಾಡಲಾಯಿತು. ಟ್ರಸ್ಟ್ ನಿದೇರ್ಶಕರಾದ ಗುಮ್ಮಗಟ್ಟ ಮಲ್ಲೇಶ್, ಬಜ್ಜಪ್ಪ, ಶ್ರೀಧರ್ ಗುಪ್ತಾ, ಮದ್ದೆನರಸೇಗೌಡ, ಶಶಾಂಕ್, ಸುಭಾಶ್‌ಪಾಳೇಗಾರ್, ಕೋಣನಕುರಿ ಕೆ.ರವಿಕುಮಾರ್, ಕೆ.ಟಿ.ಹಳ್ಳಿಚಂದ್ರು, ಉಮೇಶ್, ಆಂಜನೇಯಲು, ಹನುಮಂತರೆಡ್ಡಿ, ಹರಿನಾಥ್, ನಟಶೇಖರ್, ಶ್ರೀನಿವಾಸ್, ನಮ್ಮಹಕ್ಕುಗಿರಿ, ವಿಶ್ವನಾಥ್, ಸುಗುರಾಧನಾ, ದಕ್ಷ ಕಂಪನಿ ಸಿಬ್ಬಂದಿ ಹಾಜರಿದ್ದರು.
ರಾಸಾಯನಿಕ ರೋಗ ನಿರೋಧಕಗಳನ್ನು ಬಳಕೆಯಿಂದ ಮನುಷ್ಯನಿಗೆ ಹಾನಿ ಇರುತ್ತದೆ. ಆದರೆ, ಸಾವಯವ ದ್ರಾವಣದಿಂದ ಸೋಂಕು ನಿಯಂತ್ರಿಸಬಹುದಾಗಿದ್ದು, ದ್ರಾವಣವನ್ನು ಎಲ್ಲ ಕಡೆ ಉಪಯೋಗಿಸಿದರೆ ಪ್ರಕೃತಿ ಉಳಿಸಿ, ಕೋವಿಡ್ ರೋಗಾಣು ತಡೆಯಬಹುದು.
ಬಿ.ಸಿ.ಅರ್ಚನಾ ತಾಪಂ ಮುಖ್ಯಾಧಿಕಾರಿ
ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್‌ನಿಂದ ಸರ್ಕಾರಿ ಆಸ್ಪತ್ರೆಗೆ 33 ಜಂಬೊ ಆಕ್ಸಿಜನ್‌ಸಿಲಿಂಡರ್ ,ಮತ್ತು ಮಂಚ, ಹಾಸಿಗೆ ದಾನ ನೀಡಿದ್ದು, ತಾಲೂಕಿನಲ್ಲಿ ಸೋಂಕು ಮೀತಿ ಮೀರಿ ಹರಡುವುದನ್ನು ಕಟ್ಟಿಹಾಕಲು ಸಾವಯವ ದ್ರಾವಣ ಸಿಂಪಡಿಸುತ್ತಿರುವುದು ಅಭಿನಂದನಾರ್ಹ.
ಕೆ.ಆರ್.ನಾಗರಾಜ್ ತಹಸೀಲ್ದಾರ್