

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು ಮತ್ತೆ ಎರಡು ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಪಡೆಯಲಾಗಿದೆ.
ಯಲಹಂಕ ಬಳಿಯ ಮಾರಸಂದ್ರದ ಗಸ್ತು ಸರ್ವೆ ನಂ.182ರಲ್ಲಿ ಒತ್ತುವರಿ ಮಾಡಲಾಗಿದ್ದ 2.10 ಎಕರೆ ಅರಣ್ಯ ಜಮೀನನ್ನು ತೆರವು ಮಾಡಿ ಅಲ್ಲಿ ಸ್ಥಳೀಯ ಜಾತಿಯ ಸಸಿಗಳನ್ನು ನೆಟ್ಟು ಅರಣ್ಯ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಅರಣ್ಯ ಸಚಿವರ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಭೈರಾರೆಡ್ಡಿ ಎಂಬುವವರು ಮಾರಸಂದ್ರದ ಮೀಸಲು ಅರಣ್ಯ ಸರ್ವೆ ನಂ.182ರಲ್ಲಿ ಅರಣ್ಯ ಇಲಾಖೆಗೆ ಸೇರಿದ 2.10 ಎಕರೆ ಜಮೀನು ಒತ್ತುವರಿ ಮಾಡಿದ್ದರು. ಈ ಸಂಬಂಧ ಎ್ಐಆರ್ ದಾಖಲಿಸಿಕೊಂಡಿದ್ದ ಬೆಂಗಳೂರು ನಗರ ಜಿಲ್ಲೆಯ ಅರಣ್ಯಾಧಿಕಾರಿಗಳು ಜೆಸಿಬಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 40 ಕೋಟಿ ರೂ.ಗೂ ಅಧಿಕ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಈವರೆಗೆ 103 ಎಕರೆಗೂ ಹೆಚ್ಚು ಒತ್ತುವರಿ ತೆರವುಗೊಳಿಸಿದ್ದಾರೆ. ಕಗ್ಗಲಿಪುರ ವಲಯದ ಬಿಎಂ ಕಾವಲಿನಲ್ಲಿ 27.2 ಎಕರೆ, ತುರಹಳ್ಳಿ ಅರಣ್ಯ ವ್ಯಾಪ್ತಿಯ ಮೈಲಸಂದ್ರ, ಬಿ.ಎಂ. ಕಾವಲ್ ಮತ್ತು ಕೆಂಚೇನಹಳ್ಳಿಯಲ್ಲಿ 16.9 ಎಕರೆ, ಸೂಲಿಕೆರೆ ಮೀಸಲು ಅರಣ್ಯ ಪ್ರದೇಶದ ಸೂಲಿಕೆರೆಯಲ್ಲಿ 2.5 ಎಕರೆ, ಯು.ಎಂ. ಕಾವಲ್ ನಲ್ಲಿ 1 ಎಕರೆ, ಆನೆಕಲ್ ವಲಯದ ಭೂತನಹಳ್ಳಿ, ರಾಗಿಹಳ್ಳಿಯಲ್ಲಿ 14.4 ಎಕರೆ, ಬೆಂಗಳೂರು, ಜಾರಕಬಂಡೆ ಕಾವಲು, ಪೀಣ್ಯದಲ್ಲಿ 18 ಎಕರೆ, ಯಲಹಂಕ ವಲಯದ ಕೊತ್ತನೂರಿನಲ್ಲಿ 17.3 ಎಕರೆ, ಮಾರಸಂದ್ರದಲ್ಲಿ 2.10 ಎಕರೆ, ಇತರೆ 3.6 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ತೆರವು ಮಾಡಲಾಗಿರುವ ಭೂಮಿಯ ಒಟ್ಟು ಮೌಲ್ಯ 3000 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ.
ಕೊತ್ತನೂರಿನಲ್ಲಿ ಸುಮಾರು 700 ಕೋಟಿ ರೂ. ಬೆಲೆ ಬಾಳುವ 22.08 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಇದನ್ನು ತೆರವು ಮಾಡಲು ಕಾನೂನು ಕ್ರಮಕ್ಕೆ ಮುಂದಾಗುವಂತೆ ಕೂಡ ಈಶ್ವರ ಖಂಡ್ರೆ ಈಗಾಗಲೇ ಸೂಚನೆ ನೀಡಿದ್ದಾರೆ.