250 ಮಿಲಿಯನ್ ಜಿಮೇಲ್ ಖಾತೆಗಳಿಗೆ ಅಪಾಯ; ಜಿಮೇಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಗೂಗಲ್| Google Alert

Gmail
Published on

Google Alert: ವಿಶ್ವದಾದ್ಯಂತ ತನ್ನ ಜಿಮೇಲ್​​ ಬಳಕೆದಾರರಿಗೆ ಎಚ್ಚರಿಕೆ ನೀಡಿರುವ ಗೂಗಲ್, 250 ಮಿಲಿಯನ್ ಜಿಮೇಲ್ ಖಾತೆಗಳು ಅಪಾಯದಲ್ಲಿದ್ದು, ಹ್ಯಾಕರ್​​ಗಳ ದಾಳಿಯಿಂದ ಜಾಗರೂಕರಾಗಿರುವಂತೆ ಸೂಚಿಸಿದೆ. ತಮ್ಮ ಖಾತೆಗಳ ಸುರಕ್ಷತೆಯನ್ನು ಹೆಚ್ಚಿಸಲು ತಕ್ಷಣವೇ ಪಾಸ್​ವರ್ಡ್ ಚೇಂಜ್ ಮಾಡುವಂತೆ ಸೂಚನೆ ನೀಡಿದೆ.

ಜೊತೆಗೆ ಎರಡು-ಹಂತದ ಪರಿಶೀಲನೆಯನ್ನು (2SV) ಸಕ್ರಿಯಗೊಳಿಸಲು ಒತ್ತಾಯಿಸಿದೆ. ಸೈಬರ್ ದಾಳಿಯ ಸಂಖ್ಯೆಯಲ್ಲಿ ಗಣನೀವಾಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಗೂಗಲ್, ಶೈನಿಹಂಟರ್ಸ್ ಎಂಬ ಅಂತರರಾಷ್ಟ್ರೀಯ ಹ್ಯಾಕರ್ ಗುಂಪು ಈ ದಾಳಿಗಳ ಹಿಂದೆ ಇದೆ ಎಂದು ಶಂಕಿಸಿದೆ. 2020 ರಿಂದ ಸಕ್ರಿಯವಾಗಿರುವ ಈ ಗುಂಪು AT & T, ಮೈಕ್ರೋಸಾಫ್ಟ್, ಸ್ಯಾಂಟ್ಯಾಂಡರ್ ಮತ್ತು ಟಿಕೆಟ್‌ಮಾಸ್ಟರ್‌ನಂತಹ ಕಂಪನಿಗಳ ಡೇಟಾ ಕದಿಯುವುದರಲ್ಲಿ ಭಾಗಿಯಾಗಿದೆ. ಬಳಕೆದಾರರನ್ನು ನಕಲಿ ಲಾಗಿನ್ ಪುಟಗಳಿಗೆ ಲಾಗಿನ್ ಮಾಡಿಸಿ ಪಾಸ್‌ವರ್ಡ್‌ಗಳು ಮತ್ತು ಭದ್ರತಾ ಕೋಡ್‌ಗಳನ್ನು ಕದಿಯಲು ಫಿಶಿಂಗ್ ಅನ್ನು ಬಳಸುತ್ತಾರೆ ಎಂದು ಹೇಳಿದೆ.

ಜೂನ್‌ನಲ್ಲಿ ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ, ಶೈನಿಹಂಟರ್ಸ್ ಗುಂಪು ಹೊಸ ಡೇಟಾ ಸೋರಿಕೆ ವೇದಿಕೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ. ಇದು ಹೆಚ್ಚಿನ ಡೇಟಾ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಎಚ್ಚರಿಸಿತ್ತು. ಆಗಸ್ಟ್ 8 ರಂದು ಈ ಕುರಿತು ಬಾಧಿತ ಗ್ರಾಹಕರಿಗೆ ತಮ್ಮ ಭದ್ರತಾ ಸೆಟ್ಟಿಂಗ್‌ಗಳನ್ನು ತಕ್ಷಣ ನವೀಕರಿಸಲು ಸಲಹೆ ನೀಡುವ ವಿಶೇಷ ಇಮೇಲ್‌ಗಳನ್ನು ಕಳುಹಿಸಿದೆ.

ಎರಡು ಹಂತದ ಪರಿಶೀಲನೆ (2SV) ಏಕೆ?

ಗೂಗಲ್‌ನ ಎಚ್ಚರಿಕೆಯ ಪ್ರಕಾರ ಟೂ-ಸ್ಟೆಪ್ ವೆರಿಫಿಕೇಷನ್ (2SV) ಅನ್ನು ಸಕ್ರಿಯಗೊಳಿಸುವುದರಿಂದ ಇಮೇಲ್ ಖಾತೆಗೆ ಹೆಚ್ಚುವರಿ ರಕ್ಷಣೆ ದೊರೆಯುತ್ತದೆ. ಹ್ಯಾಕರ್‌ಗಳು ನಿಮ್ಮ ಪಾಸ್‌ವರ್ಡ್ ತಿಳಿದಿದ್ದರೂ, ಸೆಕ್ಯೂರಿಟಿ ಕೋಡ್ ಇಲ್ಲದೆ ಖಾತೆಗೆ ಲಾಗಿನ್ ಆಗುವುದು ಅಸಾಧ್ಯವಾಗುತ್ತದೆ. ಈ ಕೋಡ್ ಸಾಮಾನ್ಯವಾಗಿ ನಿಮ್ಮ ಮೊಬೈಲ್ ಅಥವಾ ವಿಶ್ವಾಸಾರ್ಹ ಡಿವೈಸ್‌ಗೆ ಕಳುಹಿಸಲಾಗುತ್ತದೆ.

ಯುಕೆಯ ಆಕ್ಷನ್ ಫ್ರಾಡ್ ಪ್ರಕಾರ, 2SV ಸಕ್ರಿಯಗೊಳಿಸಿದರೆ ಹ್ಯಾ ಕರ್‌ಗಳಿಗೆ ನಿಮ್ಮ ಖಾತೆಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುವ ಈ ಸರಳ ಕ್ರಮವು ನಿಮ್ಮ ಇಮೇಲ್ ಖಾತೆಯನ್ನು ಸುರಕ್ಷಿತವಾಗಿಡುತ್ತದೆ.

ಇದು ಕೇವಲ ಜಿಮೇಲ್‌ಗೆ ಮಾತ್ರ ಸೀಮಿತವಲ್ಲ, ಬ್ಯಾಂಕಿಂಗ್, ಆನ್‌ಲೈನ್ ಶಾಪಿಂಗ್, ಸೋಷಿಯಲ್ ಮೀಡಿಯಾ ಖಾತೆಗಳಂತಹ ಎಲ್ಲಾ ಪ್ರಮುಖ ಸೇವೆಗಳಲ್ಲಿಯೂ ಟೂ-ಫ್ಯಾಕ್ಟರ್ ಆಥೆಂಟಿಕೇಷನ್ (2FA) ಅಥವಾ ಮಲ್ಟಿ-ಫ್ಯಾಕ್ಟರ್ ಆಥೆಂಟಿಕೇಷನ್ (MFA) ಲಭ್ಯವಿದೆ ಎಂದು ತಜ್ಞರು ಸೂಚಿಸುತ್ತಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net