

ಬೆಂಗಳೂರು: ಭಾರತದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಆಡಳಿತಾವದಿಯಲ್ಲಿ 25 ಕೋಟಿ ಮಂದಿ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತಿಯ ಮಂಡಳಿಯ ಬೆಂಗಳೂರು ಶಾಖೆಯ ಕಚೇರಿಯ ಸಭಾಂಗಣದಲ್ಲಿ ನಡೆದ ೨೦೪೭ ರ ದೇಶದ ಆರ್ಥಿಕ ಗುರಿ ಕುರಿತು ಲೆಕ್ಕಪರಿಶೋಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಡತನವನ್ನು ಕೇವಲ ಹಣಕಾಸು ಸ್ಥಿತಿಯಿಂದ ಅಳೆಯಲಾಗುವುದಿಲ್ಲ ಉದ್ಯೋಗ, ಆರೋಗ್ಯ, ಸಾರಿಗೆ, ಅಡುಗೆ ಅನೀಲ, ಶುದ್ದ ಕುಡಿಯುವ ನೀರು, ವಸತಿ ಸೌಲಭ್ಯ, ಶಿಕ್ಷಣ ಎಲ್ಲವನ್ನು ತುಲನೆಮಾಡಿ ಬಡತನ ಸ್ಥಿತಿಯನ್ನು ಅಳೆಯಲಾಗುತ್ತದೆ ಈ ಎಲ್ಲ ಅಂಶಗಳ ಆಧಾರದ ಮೇಲೆ ಭಾರತದ ೨೫ ಕೋಟಿಗೂ ಅಧಿಕ ಮಂದಿ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದರು.
ಬಡವರ ಝೀರೊ ಬ್ಯಾಲೆನ್ಸ್‌ನ ಜನಧನ ಖಾತೆಯಲ್ಲಿ ಇಂದು ಎರಡು ಲಕ್ಷ ಕೋಟಿ ರೂಪಾಯಿಗೂ ಅಧಿಕ ಉಳಿತಾಯ ಹಣ ಸಂಗ್ರವಾಗಿದೆ ಇದರಿಂದ ಬಡವರ ಅರ್ಥಿಕ ಸ್ಥಿತಿಯ ಚಿತ್ರಣ ಸಿಗುತ್ತದೆ.
ಪ್ರಧಾನಮಂತ್ರಿ ಸ್ವನಿಧಿಯೋಜನೆಯ ಸಹಾಯದಿಂದ ಸಣ್ಣ ಪುಟ್ಟ ವ್ಯಾಪಾರಿಗಳು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಬ್ಯಾಂಕ್ ನಿಂದ ನೇರ ಸಾಲ ಪಡೆದು ವ್ಯಾಪಾರ ಮಾಡಬಹುದಾಗಿದ್ದು ದೇಶಾದ್ಯಂತ ಕೋಟ್ಯಾಂತರ ಮಂದಿ ಇದರ ಲಾಭ ಪಡೆಯುತ್ತಿದ್ದಾರೆ ಎಂದರು.
ಭಾರತದ ಆರ್ಥಿಕ ಪ್ರಗತಿಯಲ್ಲಿ ಭಾರತೀಯ ಲೆಕ್ಕಪರಿಶೋಧಕರ ಪಾತ್ರ ಮಹತ್ವದಾಗಿದೆ. ಮಾರಕ ರೋಗ ಕರೋನಾ ಅಂತಹ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಲೆಕ್ಕಪರಿಶೋಧಕರು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಅರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.ಜಿಎಸ್‌ಟಿ ಹಾಗೂ ಆಧಾಯ ತೆರಿಗೆ ರಿಟನ್ಸ್ ಅನ್ನು ಇನ್ನಷ್ಟು ಸರಳಗೊಳಿಸಲಾಗಿದೆ ಎಂದು ನಿರ್ಮಲ ಸೀತರಾಮನ್ ಹೇಳಿದರು.
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತಿಯ ಮಂಡಳಿಯ ಬೆಂಗಳೂರು ಶಾಖೆಯ ಚೇರಮೆನ್ ಪ್ರಮೋದ್ ಆರ್ ಹೆಗಡೆ ಮಾತನಾಡಿ, ಭಾರತದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಲೆಕ್ಕಪರಿಶೋಧಕರು ಬೆಂಗಳೂರಿನಲ್ಲಿದ್ದು, ದೇಶದ ಆರ್ಥಿಕ ಪ್ರಗತಿಗೆ ಆರಂಭದಿಂದಲೂ ಲೆಕ್ಕಪರಿಶೋಧಕರು ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.
ಕಾರ್ಯದರ್ಶಿ ಕವಿತಾ ಪರಮೇಶ್, ಸೆಂಟ್ರಲ್ ಕೌನ್ಸಿಲ್ ಮೆಂಬರ್ ಕೋಥಾ ಶ್ರೀನಿವಾಸ್ ಹಾಗೂ ದಕ್ಷಿಣ ಭಾರತೀಯ ಪ್ರಾದೇಶಿಕ ಮಂಡಳಿ ಸದಸ್ಯೆ ಎ.ಬಿ ಗೀತಾ ಹಾಜರಿದ್ದರು.