

ನವದೆಹಲಿ: ಒಂದು ದೇಶ ಒಂದು ತೆರಿಗೆ ಖ್ಯಾತಿಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯ ವ್ಯವಸ್ಥೆಯಲ್ಲಿ ಫೇಕ್ ಇನ್ವಾಯ್ಸ್ ಮೂಲಕ ತೆರಿಗೆ ವಂಚಿಸುವ ಪ್ಯಯತ್ನ ನಡೆಯುತ್ತಿದೆ. ಇತ್ತೀಚೆಗೆ ಇಂತಹ 350 ಕೇಸ್ಗಳನ್ನು ತೆರಿಗೆ ವಂಚನೆ ವ್ಯಾಪ್ತಿಯಲ್ಲಿ ದಾಖಲಿಸಿಕೊಳ್ಳಲಾಗಿದ್ದು, 25 ಜನರನ್ನು ಬಂಧಿಸಲಾಗಿದೆ ಎಂದು ಡೈರೆಕ್ಟೋರೇಟ್ ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್ (ಡಿಜಿಜಿಐ ) ಮೂಲಗಳು ತಿಳಿಸಿವೆ.
ಯಾವ್ಯಾವ ಕ್ಷೇತ್ರದಲ್ಲಿ ಫೇಕ್ ಇನ್ವಾಯ್ಸ್ ಕಾಟ ಮೆಟಲ್ಸ್, ಪ್ಲಾಸ್ಟಿಕ್ ಗ್ರಾನ್ಯೂಲ್ಸ್, ರೆಡಿಮೇಡ್ ಗಾರ್ಮೆಂಟ್ಸ್, ಚಿನ್ನ ಮತ್ತು ಬೆಳ್ಳಿ, ನಿರ್ಮಾಣ ಸೇವೆ, ಕೆಲಸ ಗುತ್ತಿಗೆ ಸೇವೆಗಳು, ಕೃಷಿ ಉತ್ಪನ್ನಗಳು, ಮಾನವ ಸಂಪನ್ಮೂಲ ಪೂರೈಕೆ ಮತ್ತು ಜಾಹೀರಾತು, ಆ್ಯನಿಮೇಶನ್ ಸರ್ವೀಸ್ ಕ್ಷೇತ್ರಗಳಲ್ಲಿ ಫೇಕ್ ಇನ್ವಾಯ್ಸ್ ಮೂಲಕ ತೆರಿಗೆ ವಂಚನೆ ಪ್ರಕರಣ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿಎಸ್ಟಿ, ಆದಾಯ ತೆರಿಗೆ ವಂಚಿಸುವ ಮೂಲಕ ಕಂಪನಿಯ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವುದಕ್ಕಾಗಿ ಫೇಕ್ ಇನ್ವಾಯ್ಸ್ ಗಳನ್ನು ಸೃಷ್ಟಿಸಲಾಗುತ್ತಿದೆ. ಅಷ್ಟೇ ಅಲ್ಲ ಇವುಗಳನ್ನು ಲೆಕ್ಕ ಪುಸ್ತಕದಲ್ಲಿನ ದತ್ತಾಂಶ ಹೆಚ್ಚಿಸಲು, ಬ್ಯಾಂಕುಗಳಿಂದ ಸಾಲ ಪಡೆಯುವುದಕ್ಕೆ ಅದೇ ರೀತಿ ಹಣವನ್ನು ಬೇರೆಡೆ ವರ್ಗಾಯಿಸುವುದಕ್ಕೆ, ರಫ್ತುದಾರರು ಜಿಎಸ್ಟಿ ರೀಫಂಡ್ ಪಡೆಯಲು ಬಳಸುತ್ತಿರುವುದು ಬೆಳಕಿಗೆ ಬಂದಿದೆ. 1,100ಕ್ಕೂ ಹೆಚ್ಚು ಸಂಸ್ಥೆಗಳು ಈ ರೀತಿ ಅಕ್ರಮ ತೋರಿವೆ.
ತೆರಿಗೆ ಪಾವತಿ ದಾಖಲಾತಿಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಸರ್ಕಾರ ಹೊಸ ಜಿಎಸ್ಟಿ ನೋಂದಣಿ ನಿಯಮವನ್ನು ಬಿಗಿಗೊಳಿಸಿದೆ. ಹೊಸ ಪರಿಷ್ಕೃತ ನಿಯಮಗಳೂ ಜಾರಿಗೆ ಬಂದಿರುವ ಕಾರಣ ತೆರಿಗೆ ವಂಚನೆ ಸುಲಭವಿಲ್ಲ. ಎಲ್ಲ ಹಣಕಾಸಿನ ವಹಿವಾಟುಗಳನ್ನೂ ಜಿಎಸ್ಟಿ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಿಯೇ ಮಾಡಬೇಕು. ಅಕ್ಟೋಬರ್ 1 ರಿಂದ ಅನ್ವಯವಾಗುವಂತೆ 500 ಕೋಟಿ ರೂಪಾಯಿಗೂ ಅಧಿಕ ವಹಿವಾಟಿನ ವ್ಯಾಪಾರೋದ್ಯಮಗಳು ಇ-ಇನ್ವಾಯಿಸ್ ಅಳವಡಿಸಿಕೊಳ್ಳಬೇಕಾದ್ದನ್ನು ಸರ್ಕಾರ ಕಡ್ಡಾಯಗೊಳಿಸಿದೆ. (ಏಜೆನ್ಸೀಸ್)