ಭಾರಿ ಮಳೆಗೆ ಉಕ್ಕಿ ಹರಿದ ವಿಶ್ವಾಮಿತ್ರ ನದಿ: ಕೇವಲ ಮೂರೇ ದಿನದಲ್ಲಿ 24 ಮೊಸಳೆ ರಕ್ಷಣೆ

Crocodiles
Published on

ಅಹಮದಾಬಾದ್​: ಕಳೆದ ಆಗಸ್ಟ್​​ 27 ರಿಂದ ಆ. 29ರವರೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಒಟ್ಟು 24 ಮೊಸಳೆಗಳನ್ನು ಗುಜರಾತಿನ ವಡೋದರಾದ ಜನವಸತಿ ಪ್ರದೇಶದಲ್ಲಿ ರಕ್ಷಣೆ ಮಾಡಲಾಗಿದೆ.

ಭಾರಿ ಮಳೆಯಿಂದಾಗಿ ವಿಶ್ವಾಮಿತ್ರ ನದಿ ಉಕ್ಕಿ ಹರಿದ ಪರಿಣಾಮ ಮೊಸಳೆಗಳು ನದಿಯನ್ನು ಬಿಟ್ಟು ಜನವಸತಿ ಪ್ರದೇಶಗಳತ್ತ ನುಗ್ಗಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನದಿಯು 400ಕ್ಕೂ ಅಧಿಕ ಮೊಸಳೆಗಳ ಆವಾಸಸ್ಥಾನವಾಗಿದೆ. ಅಜ್ವಾ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ನದಿಯಲ್ಲಿ ಪ್ರವಾಹ ಉಂಟಾಗಿ ಮೊಸಳೆಗಳು ಹೊರಬಂದಿವೆ ಎಂದು ವಡೋದರಾ ವಲಯ ಅರಣ್ಯಾಧಿಕಾರಿ ಕರಣ್‌ಸಿಂಹ ರಜಪೂತ್‌ ತಿಳಿಸಿದ್ದಾರೆ.

24 ಮೊಸಳೆಗಳನ್ನು ಹೊರತುಪಡಿಸಿ, ಹಾವುಗಳು, 40 ಕೆಜಿಗೂ ಅಧಿಕ ತೂಕದ ಐದು ದೊಡ್ಡ ಆಮೆಗಳು ಹಾಗೂ ಪಾರ್ಕುಪೈನ್​ ಸೇರಿದಂತೆ ಇತರೆ 75 ಪ್ರಾಣಿಗಳನ್ನು ಕಳೆದ ಮೂರು ದಿನಗಳಲ್ಲಿ ರಕ್ಷಣೆ ಮಾಡಲಾಗಿದೆ. ವಿಶ್ವಾಮಿತ್ರ ನದಿಗೆ ಅನೇಕ ವಸತಿ ಏರಿಯಾಗಳು ಸಮೀಪದಲ್ಲಿವೆ ಎಂದು ರಜಪೂತ್​ ಮಾಹಿತಿ ನೀಡಿದರು.

ನಾವು ರಕ್ಷಿಸಿದ ಅತ್ಯಂತ ಚಿಕ್ಕ ಮೊಸಳೆ ಎರಡು ಅಡಿ ಉದ್ದವಿದ್ದರೆ, ದೊಡ್ಡದು 14 ಅಡಿ ಉದ್ದವಿತ್ತು. ನದಿಯ ದಂಡೆಯಲ್ಲಿರುವ ಕಾಮನಾಥ್ ನಗರದಿಂದ ಗುರುವಾರ ಹಿಡಿಯಲಾಯಿತು. ಸ್ಥಳೀಯ ನಿವಾಸಿಗಳು ಈ ಬೃಹತ್ ಮೊಸಳೆಯ ಬಗ್ಗೆ ನಮಗೆ ಮಾಹಿತಿ ನೀಡಿದರು. 11 ಅಡಿ ಉದ್ದದ ಇತರ ಎರಡು ಮೊಸಳೆಗಳು ಇಎಂಇ ಸರ್ಕಲ್ ಮತ್ತು ಎಂಎಸ್ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಬಳಿಯ ತೆರೆದ ಪ್ರದೇಶದಲ್ಲಿ ಗುರುವಾರ ರಕ್ಷಿಸಲಾಯಿತು ಎಂದು ರಜಪೂತ್ ತಿಳಿಸಿದರು.

ಇಷ್ಟೊಂದು ಮೊಸಳೆಗಳನ್ನು ರಕ್ಷಣೆ ಮಾಡಿದಾದರೂ ಎಲ್ಲಿಯೂ ಮಾನವ ಮತ್ತು ಮೊಸಳೆ ಸಂಘರ್ಷದ ಘಟನೆಗಳು ವರದಿಯಾಗಿಲ್ಲ. ಸಾಮಾನ್ಯವಾಗಿ ಮೊಸಳೆಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ನದಿಯಲ್ಲಿ ಅವು ಮೀನು ಮತ್ತು ಇನ್ನಿತರ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತವೆ. ಕೆಲವೊಮ್ಮೆ ನಾಯಿಗಳು, ಹಂದಿಗಳು ಅಥವಾ ಇತರ ಯಾವುದೇ ಸಣ್ಣ ಪ್ರಾಣಿಗಳನ್ನು ಸಹ ಕೊಂದು ತಿನ್ನಬಹುದು ಎಂದು ರಜಪೂತ್​ ಹೇಳಿದರು.

ವಿಶ್ವಾಮಿತ್ರ ನದಿಯ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವುದರಿಂದ ರಕ್ಷಿಸಿದ ಮೊಸಳೆ ಹಾಗೂ ಇತರೆ ಸರೀಸೃಪಗಳನ್ನು ಮತ್ತೆ ನದಿಯಲ್ಲಿ ಬಿಡಲಾಗುವುದು ಎಂದು ರಜಪೂತ್​ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net