

ಬೆಳಗಾವಿ: ಕರೊನಾ ಬದುಕಿನ ಪಾಠ ಕಲಿಸಿದೆ ಎಂದು ಕೆಲವರು ಬೀಗುತ್ತಿದ್ದರೆ, ರಾಜ್ಯದ ಬೊಕ್ಕಸಕ್ಕೆ ಪೆಟ್ಟು ಕೊಟ್ಟಿರುವುದು ಮತ್ತಷ್ಟು ಆತಂಕ ತಂದಿರಿಸಿದೆ. ಎರಡು ವರ್ಷದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲ ಶೇ.23 ಸಾಲದ ಹೊರೆ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.
2020-21ನೇ ಸಾಲಿನ ಆರ್ಥಿಕ ಹಾಗೂ ವಿನಿಯೋಗ ಖಾತೆ ವರದಿ ಪ್ರಕಾರ, ಕರ್ನಾಟಕದಲ್ಲಿ 14,535 ಕೋಟಿ ರೂ. ತೆರಿಗೆ ಖೋತಾ ಆಗಿದೆ. ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ಮಂಡಿಸಿದ ಮಹಾಲೆಕ್ಕಪರಿಶೋಧಕರ ವರದಿ (ಸಿಎಜಿ)ಯಲ್ಲಿ ಈ ಅಂಶ ಬಯಲಾಗಿದೆ.
ಕೋವಿಡ್ ಕಾರಣದಿಂದ ರಾಜ್ಯ ಸರ್ಕಾರದ ಸಾಲ ಶೇ.23 ಹೆಚ್ಚಳವಾಗಿದೆ. ಈ ಹಿಂದೆ 3.19 ಲಕ್ಷ ಕೋಟಿ ರೂ. ಇದ್ದ ಸಾಲದ ಮೊತ್ತ ಇದೀಗ 3.97 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಒಟ್ಟು 78 ಸಾವಿರ ಕೋಟಿ ರೂ. ಸಾಲ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ರಾಜ್ಯ ಸರ್ಕಾರ ಕಟ್ಟುವ ಬಡ್ಡಿ ಪ್ರಮಾಣವೂ ಹೆಚ್ಚಾಗಿದೆ. ಪ್ರತಿ ವರ್ಷ 22,666 ಕೋಟಿ ರೂ. ಅಂದರೆ ಶೇ.14 ಆದಾಯವನ್ನು ಬಡ್ಡಿಗೆ ಪಾವತಿಸಲಾಗುತ್ತಿದೆ.
ಕೇಂದ್ರಕ್ಕೆ ಹೆಚ್ಚುವರಿ ಪಾವತಿ: ಉಳಿತಾಯ ಎನ್ನುವ ವಿಭಾಗದಲ್ಲಿ ರಾಜ್ಯ ಸರ್ಕಾರ ನೀಡಿರುವ ವರದಿಗಳು ಭಿನ್ನವಾಗಿದ್ದು, ಕೇಂದ್ರ ಸರ್ಕಾರಕ್ಕೂ 68 ಕೋಟಿ ರೂ. ಹೆಚ್ಚುವರಿ ಪಾವತಿಯಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದೆ. ಕಳೆದ ಐದು ವರ್ಷದಿಂದ ನೀರಾವರಿ ಇಲಾಖೆಗೆ ಸಂಬಂಧಿಸಿದ 13 ಯೋಜನೆಗಳು, 41 ರಸ್ತೆ, 3 ಸೇತುವೆ ಹಾಗೂ ಒಂದು ಯೋಜನೆ ಪೂರ್ಣಗೊಂಡಿಲ್ಲ ಎನ್ನುವ ವಿಷಯವನ್ನು ವರದಿಯಲ್ಲಿ ಹೇಳಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಸಂಖ್ಯೆ ಮತ್ತೆ ಇಳಿಕೆಯಾಗಿದ್ದು, ಮಂಗಳವಾರ 71 ಸಾವಿರ ಮಾದರಿಗಳ ಟೆಸ್ಟ್ ನಡೆಸಲಾಗಿದೆ. 263 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 7 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 327 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.55 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,165 ಇದೆ. ಈವರೆಗೂ 38,275 ಮಂದಿ ಮೃತರಾಗಿದ್ದು, 30 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಬ್ಬರು, ಬೆಳಗಾವಿ, ಬೆಂಗಳೂರು ನಗರ, ಬೀದರ್, ತುಮಕೂರು, ಉತ್ತರ ಕನ್ನಡದಲ್ಲಿ ತಲಾ ಒಬ್ಬರಂತೆ ಏಳು ಮಂದಿ ಅಸುನೀಗಿದ್ದಾರೆ.
ವಿದೇಶಿಗರಿಂದ ಮೂರನೇ ಅಲೆ?: ಕಳೆದೊಂದು ವಾರದಿಂದ ವಿದೇಶದಿಂದ ಆಗಮಿಸಿದ 20 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ವಿವಿಧೆಡೆ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಕೋವಿಡ್ 3ನೇ ಅಲೆ ಅಂತಾರಾಷ್ಟ್ರೀಯ ಪ್ರಯಾಣಿಕ ರಿಂದಲೇ ಬರುವುದೆಂಬ ಆತಂಕ ಶುರುವಾಗಿದೆ.