

ಶಿವಮೊಗ್ಗ: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಇಲ್ಲೊಂದು ಸಂತಸದ ಸುದ್ದಿ. ಶಿವಮೊಗ್ಗ ಹೊರವಲಯದ ನಿದಿಗೆಯಲ್ಲಿ ಸಿದ್ಧಗೊಂಡ ಬರೋಬ್ಬರಿ 23 ಅಡಿ ಎತ್ತರದ ಪ್ರತಿಮೆ ಸೋಮವಾರ ಮಧ್ಯಾಹ್ನ ಬಳ್ಳಾರಿಯತ್ತ ಮುಖಮಾಡಿತು.
ಪುನೀತ್ ನಿಧನದ ಬಳಿಕ ಅಪ್ಪು ಅಭಿಮಾನಿಗಳ ಕೋರಿಕೆಯ ಮೇರೆಗೆ ಸಚಿವ ಬಿ. ಶ್ರೀರಾಮುಲು ಅವರ ಇಚ್ಛೆಯಂತೆ ಅತ್ಯಾರ್ಷಕ ಮತ್ತು ನೈಜತೆಯಿಂದ ಕೂಡಿದ ಬೃಹತ್ ಕಂಚಿನ ಮಾದರಿ ಪ್ರತಿಮೆಯನ್ನು ನಿದಿಗೆಯಲ್ಲಿ ಖ್ಯಾತ ಶಿಲ್ಪಿ ಜೀವನ್ ನೇತೃತ್ವದ 16 ಮಂದಿ ತಂಡ ಸಿದ್ಧಪಡಿಸಿದೆ.
23 ಅಡಿ ಎತ್ತರದ ಪ್ರತಿಮೆ ಇದಾಗಿದ್ದು 3 ತಿಂಗಳಲ್ಲಿ ಕಬ್ಬಿಣ, ಫೈಬರ್‌ನಿಂದ ನಿರ್ಮಿಸಿದ್ದು 3 ಟನ್ ಸಾಮರ್ಥ್ಯ ಹೊಂದಿದೆ. ಅದರಲ್ಲಿ 1 ಟನ್ ಕಬ್ಬಿಣವೇ ಇದ್ದು ಜೀವನ್ ಮತ್ತು ಅವರ ತಂಡ ಈ ಪ್ರತಿಮೆಗಾಗಿ ಹಗಲಿರಳೂ ಶ್ರಮಿಸಿದೆ. ಆರಂಭದಲ್ಲಿ ಮಣ್ಣಿನಲ್ಲಿ ಸಿದ್ಧಪಡಿಸಿ ಮೌಲ್ಡ್ ಮಾಡಿಕೊಂಡು ನಂತರ ಪ್ರತಿಮೆ ಮಾಡಲಾಗಿದೆ. 40 ಅಡಿ ಉದ್ದದ 20 ಚಕ್ರದ ಲಾರಿಯಲ್ಲಿ ಪುನೀತ್ ಪ್ರತಿಮೆಯನ್ನು ಬಳ್ಳಾರಿಗೆ ಕಳಿಸಲಾಯಿತು. ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಜ.21ರಂದು ಬಳ್ಳಾರಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಅದೇ ಸಂದರ್ಭದಲ್ಲಿ ಪ್ರತಿಮೆ ಅನಾವರಣಗೊಳ್ಳಲಿದೆ.