

ಬೆಂಗಳೂರು: ಶಾಲಾ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು ಮದ್ಯಪಾನ ಮಾಡಿ ಶಾಲಾ ವಾಹನವನ್ನು ಚಾಲನೆ ಮಾಡುತ್ತಿದ್ದ 23 ಚಾಲಕರನ್ನು ಪತ್ತೆ ಹಚ್ಚಿದ್ದಾರೆ.
ಶಾಲಾ ವಾಹನ ಚಾಲಕರು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಮಂಗಳವಾರ ಬೆಳಗ್ಗೆ ೭ ಗಂಟೆಯಿಂದ ೯.೩೦ ರವರೆಗೆ ಒಟ್ಟು ೩೦೧೬ ವಾಹನಗಳ ತಪಾಸಣೆ ನಡೆಸಿದ್ದು, ಈ ವೇಳೆ ೨೩ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ. ೨೩ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಪೊಲೀಸರು ಡ್ರೈವಿಂಗ್ ಲೈಸೆನ್ಸ್ ಅಮಾನತ್ತುಪಡಿಸಲು ಸಂಬಂಧಪಟ್ಟ ಆರ್‌ಟಿಒಗೆ ಪತ್ರ ಬರೆದಿದ್ದಾರೆ.
ತಪಾಸಣೆಯ ಸಮಯದಲ್ಲಿ ಫಿಟ್ನೆಸ್ ಪ್ರಮಾಣ(ಎ್.ಸಿ) ಪತ್ರವನ್ನು ಹೊಂದಿರದ ಒಟ್ಟು ೧೧ ವಾಹನಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಈ ವಿಶೇಷ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.