

ದೇಸಿ ಉತ್ಪನ್ನಗಳನ್ನು ಜನರಿಗೆ ಒಂದೇ ಸೂರಿನಡಿ ದೊರಕಿಸುವ ಉದ್ದೇಶದಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಜ.22ರಿಂದ 26ರವರೆಗೆ ಸ್ವದೇಶಿ ಮೇಳ ಆಯೋಜಿಸಲಾಗಿದೆ ಎಂದು ಮೇಳದ ಸಂಚಾಲಕ ಎನ್.ಆರ್.ಮಂಜುನಾಥ್ ತಿಳಿಸಿದರು.
ಐದು ದಿನಗಳ ಈ ಮೇಳದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸ್ವದೇಶಿ ಉತ್ಪನ್ನಗಳು ದೊರೆಯಲಿವೆ. ಜತೆಗೆ ಸ್ವದೇಶಿ ಉತ್ಪನ್ನಗಳ ಮಹತ್ವ ಪರಿಚಯಿಸುವ ವಿಚಾರಗೋಷ್ಠಿಗಳು, ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
22ರಂದು ಸಂಜೆ 5 ಗಂಟೆಗೆ ಮೈಸೂರಿನ ರಾಮಕೃಷ್ಣ ಆಶ್ರಮದ ಮುಕ್ತಿದಾನಂದಜೀ ಮಹಾರಾಜ್ ಸಾನ್ನಿಧ್ಯದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಸ್ವದೇಶಿ ಮೇಳ ಉದ್ಘಾಟಿಸಲಿದ್ದಾರೆ. ಸ್ವದೇಶಿ ಜಾಗರಣ ಮಂಚ್‌ನ ಅಖಿಲ ಭಾರತೀಯ ಸಂಯೋಜಕ ಸತೀಶ್ ಮುಖ್ಯ ಭಾಷಣ ಮಾಡುವರು. ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಕೆ.ಹರೀಶ್‌ಗೌಡ ಮುಖ್ಯಅತಿಥಿಗಳಾಗಿ ಭಾಗವಹಿಸುವರು ಎಂದರು.
ಜ.23ರಂದು ಮಧ್ಯಾಹ್ನ 2.30ಕ್ಕೆ ಮಂಡ್ಯ ಜಿಲ್ಲೆಯ ಸಾವಯವ ರೈತ ವಿಕಾಸ್ ಬೂದನೂರು ಅವರು ಅಣಬೆ ಕೃಷಿ ಕುರಿತು ತರಬೇತಿ ಶಿಬಿರ ನಡೆಸಿಕೊಡಲಿದ್ದಾರೆ. ಜ.24ರಂದು ಬೆಳಗ್ಗೆ 10.30ಕ್ಕೆ ಗೋಪಾಲಕರ ಸಮ್ಮೇಳನ ನಡೆಯಲಿದೆ. ಗೋ ಆಧಾರಿತ ಆರ್ಥಿಕತೆ ಕುರಿತು ಆರ್ಥಿಕ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಲಿದ್ದಾರೆ. ಗೋ ಸೇವಾ ಗತಿವಿಧಿಯ ಪ್ರವೀಣ ಸರಳಾಯ ಅವರು ಗೋ ಉತ್ಪನ್ನಗಳ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಜ.25ರಂದು ಬೆಳಗ್ಗೆ 11 ಬೆಂಗಳೂರಿನ ಪ್ರತಿಮಾ ಅಡಿಗ ಅವರು ತಾರಸಿ ತೋಟ ತರಬೇತಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಮಹಿಳಾ ಸಮಾವೇಶ ನಡೆಯಲಿದೆ. ಜ.26ರಂದು ಬೆಳಗ್ಗೆ 11ರಿಂದ ಮೈಸೂರಿನ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸಾ ತಜ್ಞ ಡಾ.ಅರುಣ್‌ಕುಮಾರ್ ಅವರಿಂದ ಆಯುರ್ವೇದ ಆರೋಗ್ಯ ಶಿಬಿರ. ಅಂದು ಸಂಜೆ 6 ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸ್ವದೇಶಿ ಜಾಗರಣ ಮಂಚ್‌ನ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಸುಂದರಂ ಭಾಗವಹಿಸಲಿದ್ದಾರೆ. ಪ್ರತಿದಿನ ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಭಾರತೀಯ ಪಾರಂಪರಿಕ ಉಡುಗೆಯಾದ ಸೀರೆಯುಟ್ಟು ಮೇಳಕ್ಕೆ ಬರುವ ಮಹಿಳೆಯರಿಗೆ ಲಕ್ಕಿಡಿಪ್ ಮುಖಾಂತರ ನಿತ್ಯ ಮೂವರಿಗೆ ಸೌಭಾಗ್ಯವತಿ ಸೀರೆ ಉಡುಗೊರೆ ನೀಡಲಾಗುವುದು. ಜತೆಗೆ ಮೇಳದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಲ್ಲಿ ಸ್ಥಳೀಯ ಉದ್ಯಮಿಗಳನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಸ್ವದೇಶಿ ಜಾಗರಣ ಮಂಚ್‌ನ ಶಿವು, ಸಿದ್ದರಾಜು, ಶ್ರೀವತ್ಸ ಇದ್ದರು.